ಹಳೆ ಸುದ್ದಿಗೆ ಜೀವ; ವಾಸು ನಿರ್ದೇಶನದಲ್ಲಿ ಪುನೀತ್

SUJENDRA
ಸುಮಾರು ನಾಲ್ಕು ವರ್ಷಗಳ ಹಿಂದೆ, ಅಂದರೆ 'ಆಪ್ತಮಿತ್ರ' ಸೂಪರ್ ಹಿಟ್ ಆಗಿದ್ದಾಗ ಈ ಮಾತು ಕೇಳಿ ಬಂದಿತ್ತು. ಅದಕ್ಕೀಗ ಮತ್ತೆ ಜೀವ ಬಂದಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಚಿತ್ರವೊಂದಕ್ಕೆ ಜನಪ್ರಿಯ ನಿರ್ದೇಶಕ ಪಿ. ವಾಸು ಆಕ್ಷನ್-ಕಟ್ ಹೇಳುವುದು ಖಾತ್ರಿಯಾಗಿದೆ.

ಪಿ. ವಾಸು ಅಂದ ಕೂಡಲೇ ಪಕ್ಕನೆ ನೆನಪಿಗೆ ಬರೋದು ಸಾಹಸಸಿಂಹ ವಿಷ್ಣುವರ್ಧನ್‌ರ ಆಪ್ತಮಿತ್ರ ಮತ್ತು ಆಪ್ತರಕ್ಷಕ ಚಿತ್ರಗಳು. ಅವೆರಡೂ ಕನ್ನಡ ಚಿತ್ರರಂಗದಲ್ಲಿ ಭಾರೀ ಧೂಳೆಬ್ಬಿಸಿದ್ದವು. ವಾಸು ನಿರ್ದೇಶನದ ಇತ್ತೀಚಿನ 'ಆರಕ್ಷಕ' ಮಾತ್ರ ಯಾಕೋ ಡಲ್ಲು ಹೊಡೆದಿತ್ತು. ಸಿನಿಮಾ ಚೆನ್ನಾಗಿದ್ದರೂ, ಗೊಂದಲ ಹೆಚ್ಚಾದ ಕಾರಣ ಪ್ರೇಕ್ಷಕ ಮಹಾಶಯ ಚಿತ್ರಮಂದಿರದತ್ತ ಬರೋ ಧೈರ್ಯ ಮಾಡಲೇ ಇಲ್ಲ.

ಆದರೂ ನಿರ್ದೇಶಕ ವಾಸು ಇದನ್ನು ಹಿನ್ನಡೆ ಎಂದು ಭಾವಿಸಿಲ್ಲ. ಬದಲಿಗೆ ಇನ್ನೊಂದು ಹೆಜ್ಜೆ ಇಟ್ಟು ಅದನ್ನು ಮರೆಯೋಣ ಅಂತ ಹೊರಟಿದ್ದಾರೆ. ಹಳೆಯ ಪ್ರೊಜೆಕ್ಟ್ ಒಂದಕ್ಕೆ ಜೀವ ತುಂಬಿದ್ದಾರೆ. ಅದು 2008ರ ಫೆಬ್ರವರಿ ತಿಂಗಳು. ಆಪ್ತಮಿತ್ರವನ್ನು ತಮಿಳಿನಲ್ಲಿ ಚಂದ್ರಮುಖಿಯನ್ನಾಗಿಸಿದ್ದ ವಾಸು, ಪುನೀತ್ ಚಿತ್ರವನ್ನು ಕೈಗೆತ್ತಿಕೊಳ್ಳುವ ಯೋಚನೆ ಮಾಡಿದ್ದರು.

ಆಗ ಆ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದು ಶಿವಾಜಿ ಪ್ರೊಡಕ್ಷನ್ಸ್. ಸ್ವತಃ ವಾಸು ಕಥೆಯನ್ನು ಹಿಡಿದುಕೊಂಡು ಪುನೀತ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಬಳಿ ಹೋಗಿದ್ದರು. ಮನೆಯಲ್ಲೇ ಕುಳಿತು ಕಥೆಯ ಬಗ್ಗೆ ಚರ್ಚೆಯನ್ನೂ ನಡೆಸಲಾಗಿತ್ತು. ರಜನಿಕಾಂತ್ 'ಕುಸೇಲನ್' ಮುಗಿದ ನಂತರ ಕನ್ನಡ ಚಿತ್ರ ನಿರ್ದೇಶಿಸುವ ನಿರ್ಧಾರ ವಾಸು ಅವರದ್ದಾಗಿತ್ತು.

ಆದರೆ ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ. 'ಆಪ್ತರಕ್ಷಕ' ಚಿತ್ರದ ನಂತರ ಇನ್ನೊಮ್ಮೆ ಸುದ್ದಿಯಾಯಿತಾದರೂ ನಂತರ ಅದು ಠುಸ್ಸಾಗಿತ್ತು. ಕೊನೆಗೆ ಬರೋಬ್ಬರಿ ನಾಲ್ಕು ವರ್ಷಗಳ ನಂತರ ಮತ್ತೆ ಅದೇ ಪ್ರೊಜೆಕ್ಟ್ ಎದ್ದು ನಿಲ್ಲುವ ಸಾಧ್ಯತೆಗಳು ಗೋಚರಿಸುತ್ತಿವೆ. ಆದರೆ ನಿರ್ಮಾಪಕರು ಬದಲಾಗಿದ್ದಾರೆ. ಶಿವಾಜಿ ಪ್ರೊಡಕ್ಷನ್ಸ್ ಜಾಗಕ್ಕೆ ಕೆ.ಪಿ. ಶ್ರೀಕಾಂತ್ ಬಂದಿದ್ದಾರೆ.

ವಾಸು ನಿರ್ದೇಶನದ ಚಿತ್ರವನ್ನು ನಿರ್ಮಿಸುತ್ತಿರುವುದು ಹೌದೆಂದು ನಿರ್ಮಾಪಕ ಶ್ರೀಕಾಂತ್ ಒಪ್ಪಿಕೊಂಡಿದ್ದಾರೆ. ಈ ಬಾರಿಯಾದರೂ ಅಂದುಕೊಂಡದ್ದು ನಡೆದರೆ, ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಾರೆ. ಪಿಎಚ್‌ಕೆ ದಾಸ್ ಕ್ಯಾಮರಾ ಹಿಡಿಯಲಿದ್ದಾರೆ. ಜೂನ್ ನಂತರದ ಶುಭಮುಹೂರ್ತದಲ್ಲಿ ಚಿತ್ರ ಶುರುವಾಗಲಿದೆ.

ವೆಬ್ದುನಿಯಾವನ್ನು ಓದಿ