ಹೆಸರು ಅಂಬಿಯದ್ದು, ಲಾಭ ನಾಣಿ ಪುತ್ರ ಪಂಕಜ್‌ಗೆ!

SUJENDRA
ಹೂವಿನ ಜತೆ ನಾರೂ ಸ್ವರ್ಗಕ್ಕೆ ಹೋದಂತೆ ಎಂಬ ಅಣಿಮುತ್ತನ್ನು ಎಲ್ಲರೂ ಕೇಳಿರುತ್ತೇವೆ. ಈ ಮಾತನ್ನು ಇಲ್ಲಿ ಹೇಳಲು ಕಾರಣ, ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ನಾರಾಯಣ್ ಪುತ್ರ ಪಂಕಜ್. ಯಾರು ಹೂವು, ಯಾರು ನಾರು ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ತನ್ನ ಮಗನೂ ಯಶಸ್ವಿ ನಾಯಕನಾಗಬೇಕೆನ್ನುವುದಷ್ಟೇ ನಾರಾಯಣ್ ಸದ್ಯದ ಗುರಿಯಾಗಿರುವುದರಿಂದ ಇತರ ಸಂಗತಿಗಳ ಬಗ್ಗೆ ಅವರೂ ತಲೆ ಕೆಡಿಸಿಕೊಂಡಿಲ್ಲ!

ಇದೆಲ್ಲ ಹೇಗೆ ಅಂತೀರಾ? ಪಂಕಜ್ ನಾಯಕನಾಗಿರೋ ಚಿತ್ರಗಳಲ್ಲಿ ಅಂಬರೀಷ್ ನಟಿಸುವಂತೆ ಮಾಡುವುದು. ಹಾಗೆ ಮಾಡಿ ಪ್ರಚಾರ ತೆಗೆದುಕೊಂಡಾದರೂ ತನ್ನ ಮಗನ ಚಿತ್ರ ಹಿಟ್ ಆಗುತ್ತೋ ಎಂಬ ಆಸೆ ನಾರಾಯಣ್‌ರದ್ದು. ಇದಕ್ಕೆ ಸಿಕ್ಕಿರುವ ಎರಡು ಉದಾಹರಣೆಗಳು ರಣ ಮತ್ತು ಚೌಡಯ್ಯ ಚಿತ್ರಗಳು.

'ರಣ' ಚಿತ್ರದಲ್ಲಿ ನಾರಾಯಣ್ ಪಾಲು ಏನೂ ಇಲ್ಲ. ಅವರ ನಿರ್ದೇಶನವಾಗಲೀ, ನಿರ್ಮಾಣವಾಗಲೀ ಚಿತ್ರಕ್ಕಿಲ್ಲ. ಆದರೂ ಅವರು ಅಲ್ಲಿ ಪ್ರಭಾವ ಬೀರಿರುವುದು ಎದ್ದು ಕಾಣುವ ಸಂಗತಿ. ಅವರದ್ದೇ ಕ್ಯಾಂಪಿನಿಂದ ಬಂದಿರೋ ಚಿತ್ರವಿದು ಅನ್ನೋದು ಎಲ್ಲರ ಬಾಯಲ್ಲಿ ನಲಿದಾಡುತ್ತಿರುವ ಸತ್ಯ.

ಶಿವಾನಂದ್ ಮಾದಶೆಟ್ಟಿ ಎಂಬವರು ನಿರ್ಮಿಸಿರುವ, ಶ್ರೀನಿವಾಸ ಮೂರ್ತಿ ನಿರ್ದೇಶನದ 'ರಣ'ದಲ್ಲಿ ಪಂಕಜ್ ನಾಯಕ. ಇಲ್ಲಿ ಅಂಬರೀಷ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಸಾಮಾನ್ಯವಾಗಿ ಅಂಬರೀಷ್ ಯಾವುದೇ ಚಿತ್ರಗಳನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೂ ನಾರಾಯಣ್ ಮಾತಿಗೆ ಕಟ್ಟುಬಿದ್ದು ಅಂಬಿ ನಟಿಸಿದ್ದಾರೆ.
SUJENDRA

ಇದಿಷ್ಟು ಸಾಲದು ಎಂಬಂತೆ ಈಗ ಇನ್ನೊಂದು ಚಿತ್ರಕ್ಕೆ ನಾರಾಯಣ್ ಕೈ ಹಾಕಿದ್ದಾರೆ. ಚಿತ್ರದ ಹೆಸರು 'ಚೌಡಯ್ಯ'. ಚೌಡಯ್ಯ ಅಂದ ಕೂಡಲೇ ಅಂಬರೀಷ್ ತಾತ ಪಿಟೀಲು ಚೌಡಯ್ಯನವರ ಚಿತ್ರವೆಂದು ಯಾರೂ ಭಾವಿಸಬೇಕಾಗಿಲ್ಲ. ಅವರಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ.

ನಾರಾಯಣ್ ಚೌಡಯ್ಯದಲ್ಲಿ ಅಂಬರೀಷ್ ವಿಭಿನ್ನ ಪಾತ್ರದಲ್ಲಿ, ಅಂದರೆ ಹಳ್ಳಿ ಗಮಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದಪ್ಪ ಮೀಸೆ, ಬಾಚದ ಕೂದಲು, ಮಾಸಿದ ಬಟ್ಟೆ ಈ ಪಾತ್ರದ ಸ್ಪೆಷಾಲಿಟಿ. ಇಷ್ಟೆಲ್ಲ ಹೇಳಿದ ಮೇಲೆ ಇಲ್ಲಿ ಅಂಬಿಯೇ ನಾಯಕ ಅಂತ ನೀವಂದುಕೊಂಡಿದ್ದರೆ, ಅದು ನಿಜವಲ್ಲ. ಅಂಬಿಯದ್ದು ಇಲ್ಲಿ ಪೋಷಕ ಪಾತ್ರ. ನಾಯಕ ನಾರಾಯಣ್ ಪುತ್ರ ಪಂಕಜ್!

ಈ ರಣ ಮತ್ತು ಚೌಡಯ್ಯ ಎರಡೂ ಚಿತ್ರಗಳಲ್ಲಿ ಅಂಬರೀಷ್ ಪಾತ್ರವನ್ನು ಜಾಹೀರಾತುಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ವೈಭವೀಕರಿಸಲಾಗುತ್ತಿದೆ. ಹಾಗೆಂದು ಅವರ ಪಾತ್ರವೇ ಪ್ರಮುಖ ಎಂದು ಭಾವಿಸಿದರೆ, ಅದು ಮೂರ್ಖತನವಾದೀತು. ಇಲ್ಲಿರುವ ಉದ್ದೇಶ ಸ್ಪಷ್ಟ. ಕಲಿಯುಗದ ಕರ್ಣ ಅಂಬಿಯನ್ನು ಬಳಸಿಕೊಂಡು ಮಗನಿಗೊಂದು ಫ್ಲ್ಯಾಟ್‌ಫಾರ್ಮ್ ನಿರ್ಮಿಸುವುದು. ಹೇಗಿದೆ ನಾಣಿ ಐಡಿಯಾ?!

ವೆಬ್ದುನಿಯಾವನ್ನು ಓದಿ