'18ನೇ ಕ್ರಾಸ್'ಗೆ ರಾಧಿಕಾ ಬಂದಿದ್ದು ನಿಮಗೆ ನೆನಪಿದ್ಯಾ?

WD
ಅಂದಕಾಲತ್ತಿಲ್ ಲವ್ ಸ್ಟೋರಿ, ಅದೂ ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿ ನಡೆದಿರುವಂತದ್ದು. ದೀಪಕ್ ಮತ್ತು ರಾಧಿಕಾ ಪಂಡಿತ್ ಇದೇ ಕ್ರಾಸ್‌ನಲ್ಲಿ ಪ್ರೀತಿ ಮಾಡಿದ್ದರು. ಆದರೆ 'ಕಂಕಣ ಬಲ' ಕೂಡಿ ಬಂದಿರಲಿಲ್ಲ. ಕಾರಣ, ಹತ್ತಾರು ವಿಘ್ನಗಳು. ಅವೆಲ್ಲವನ್ನೂ ಮುಗಿಸಿ ಬರೋಬ್ಬರಿ ಆರೇಳು ವರ್ಷಗಳ ನಂತರ ಎಲ್ಲರೆದುರು ಬರಲು ರೆಡಿಯಾಗಿದ್ದಾರೆ!

ನಿಮಗೆ ನೆನಪಿದೆಯೋ ಇಲ್ಲವೋ, ಈ ಚಿತ್ರದ ಹೆಸರು '18ನೇ ಕ್ರಾಸ್'. 2006ರ ಆಸುಪಾಸಿನಲ್ಲಿ ಆರಂಭವಾಗಿದ್ದ ಸಿನಿಮಾ. ರಾಧಿಕಾ ಪಂಡಿತ್‌ಗಿದು ಚೊಚ್ಚಲ ಚಿತ್ರ. 'ಶಿಷ್ಯ' ಖ್ಯಾತಿಯ ದೀಪಕ್ ನಾಯಕ. ಎಲ್ಲೋ ಇದ್ದವರು ಈ ಚಿತ್ರದ ಮೂಲಕ ನಾಯಕ-ನಾಯಕಿಯಾಗಿದ್ದರು. ಆದರೆ ದೌರ್ಭಾಗ್ಯ, ಚಿತ್ರ ಆರಂಭವಾಗಿತ್ತೇ ವಿನಃ ಅಂತ್ಯಗೊಂಡಿರಲಿಲ್ಲ.

ಆರಂಭದಲ್ಲೇ ಚಿತ್ರೀಕರಣ ಕುಂಟುತ್ತಾ ಸಾಗಿತ್ತು. ಅಷ್ಟರಲ್ಲೇ ನಿರ್ಮಾಪಕ ಚಿಕ್ಕಣ್ಣ ತೀರಿಕೊಂಡರು. ಪ್ರೊಜೆಕ್ಟ್ ನಿಂತು ಹೋಯಿತು. ಇತ್ತ ರಾಧಿಕಾಗೆ ಶಶಾಂಕ್ 'ಮೊಗ್ಗಿನ ಮನಸು' ಆಫರ್ ಮಾಡಿದರು. ಅತ್ತ ದೀಪಕ್‌ಗೆ ಬೇರೆ ಆಫರುಗಳು ಸಿಕ್ಕಿದವು. ಅಂತೂ ಒಂದೆರಡು ವರ್ಷಗಳಲ್ಲಿ ಚಿತ್ರೀಕರಣ ಮುಗಿಯಿತು. ಬಿಡುಗಡೆಗೆ ಕಳೆದೆರಡು ವರ್ಷಗಳಿಂದ ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಕೊನೆಗೂ ಈಗ ಬಿಡುಗಡೆಯಾಗುತ್ತಿದೆ. ಇದೇ ಆಗಸ್ಟ್ 3ರ ಶುಕ್ರವಾರ '18ನೇ ಕ್ರಾಸ್' ತೆರೆಗೆ ಬರುತ್ತಿದೆ.

ತನ್ನ ಮೊದಲ ಚಿತ್ರ ಬಿಡುಗಡೆಯಾಗುತ್ತಿರುವುದಕ್ಕೆ ರಾಧಿಕಾ ಪಂಡಿತ್ ಸಂತಸ ವ್ಯಕ್ತಪಡಿಸಿದ್ದಾರೆ. "ಇದು ನಾನು ಮೊದಲು ಕ್ಯಾಮರಾ ಎದುರಿಸಿದ ಸಿನಿಮಾ. ಅದುವರೆಗೆ ನಾನು ಧಾರಾವಾಹಿಗಳಲ್ಲಷ್ಟೇ ನಟಿಸಿದ್ದೆ. ಅದರ ನಿರ್ಮಾಪಕ ಚಿಕ್ಕಣ್ಣ ತುಂಬಾ ಒಳ್ಳೆಯವರು. ಅವರ ನಿಧನದ ನಂತರ ಅವರ ಪತ್ನಿ ರತ್ನ ಜವಾಬ್ದಾರಿ ವಹಿಸಿಕೊಂಡು ಚಿತ್ರ ಮುಗಿಸಿದರು. ಈಘ ಅದು ಬಿಡುಗಡೆಯಾಗುತ್ತಿದೆ. ಚಿತ್ರ ಗೆಲ್ಲಲಿ ಎಂದು ಹಾರೈಸುತ್ತೇನೆ. ಆ ಕುಟುಂಬಕ್ಕಾದರೂ ಇದರಿಂದ ಸಹಾಯವಾಗಲಿ ಅನ್ನೋದು ನನ್ನ ಬಯಕೆ" ಎಂದಿದ್ದಾರೆ.

ಚಿಕ್ಕಣ್ಣ ಅವರ ಕೊನೆಯ ಮಗ ಮತ್ತು ವಿತರಕ ಜಯಣ್ಣ ತುಂಬಾ ಶ್ರಮ ವಹಿಸಿ '18ನೇ ಕ್ರಾಸ್' ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಅಂದ ಹಾಗೆ, ಈ ಚಿತ್ರವನ್ನು ನಿರ್ದೇಶಿಸಿರುವುದು ಶಂಕರ್. ಅರ್ಜುನ್ ಜನ್ಯ ಸಂಗೀತವಿದೆ. ಇನ್ನೊಂದು ವಿಶೇಷವೆಂದರೆ ಈ ಚಿತ್ರದ ಮೊದಲರ್ಧಕ್ಕೆ ಬಿ.ಎಲ್. ಬಾಬು ಛಾಯಾಗ್ರಹಣ. ಇಂಟರ್ವೆಲ್ ನಂತರ ಪಿ.ಎಲ್. ರವಿ ಛಾಯಾಗ್ರಹಣ ಮಾಡಿದ್ದಾರೆ. ವಿನಯಾ ಪ್ರಸಾದ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ