ಸಲ್ಮಾನ್‌ಗೆ ಪ್ರೇಮ ನಿವೇದನೆ ಮಾಡಿದ 3ರ ಬಾಲೆ

ಗುರುವಾರ, 27 ಆಗಸ್ಟ್ 2015 (16:54 IST)
ಇನ್ನು ಕೆಲವು ತಿಂಗಳಲ್ಲಿ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಬಾಲಿವುಡ್ ಸೂಪರ್ ಸ್ಟಾರ್ ಯಾವಾಗ ಮದುವೆಯಾಗುತ್ತಾರೆ ಎಂಬುದು ಅವರ ಅಭಿಮಾನಿಗಳನ್ನು ಕಾಡುತ್ತಿರುವ ದೊಡ್ಡ ಪ್ರಶ್ನೆ. ತಮ್ಮ ಮದುವೆಯ ಬಗ್ಗೆ ಸಲ್ಲುಮಿಯಾ ಸಹ ಯಾವ ಸುದ್ದಿಯನ್ನು ನೀಡುತ್ತಿಲ್ಲ. ಆದರೆ ಅವರಿಗೀಗ ಮದುವೆಯ  ಪ್ರಪೋಸಲ್ ಬಂದಿದೆ. ಯಾರಪ್ಪ ಆ ಸುಂದರಿ ಅನ್ನುತ್ತೀರಾ?  3 ವರ್ಷದ ಪೋರಿಯೊಬ್ಬಳು ತನ್ನ ನೆಚ್ಚಿನ ಸಲ್ಲುನನ್ನು ಮದುವೆಯಾಗುವ ಬಯಕೆಯನ್ನು ಬಿಚ್ಚಿಟ್ಟಿದ್ದಾಳೆ. 
 
ಸಲ್ಲುಗೆ ಮಗುವಿನಿಂದ ಪ್ರಾರಂಭವಾಗಿ ಶತಕ ದಾಟಿದ ವೃದ್ಧ ಅಭಿಮಾನಿಗಳು ಸಹ ಇದ್ದಾರೆ. ಭಜರಂಗಿ ಭಾಯಿಜಾನ್ ಸಿನಿಮಾ ತೆರೆ ಕಂಡ ನಂತರ ಅವರ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಿರುವುದಂತೂ ಸತ್ಯ. 
 
ಇದೀಗ ನಿತ್ಯ ಎಂಬ 3 ವರ್ಷದ ಪೋರಿಯೊಬ್ಬಳು ಸಲ್ಮಾನ್‍ಖಾನ್‍ಗೆ ಪ್ರೀತಿಯ ನಿವೇದನೆ ಮಾಡಿಕೊಂಡು ಗಮನ ಸೆಳೆದಿದ್ದಾಳೆ. 
 
ತಾನು ಸಲ್ಮಾನ್‍ನನ್ನು ಮದುವೆಯಾಗಲು ಬಯಸಿದ್ದೇನೆ ಎಂದು ಪುಟ್ಟ ಬಾಲೆ ನಿತ್ಯಾ ಪ್ರೇಮ ನಿವೇದನೆ ಮಾಡಿಕೊಂಡಿರುವ ವಿಡಿಯೋವೀಗ ಫೇಸ್‍ಬುಕ್  ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅಪಾರ ಮೆಚ್ಚುಗೆ ಗಳಿಸಿದೆ. 
 
ಸಲ್ಲುವಿನ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಆಗಸ್ಟ್ 25 ರಂದು ಪೋಸ್ಟ್ ಮಾಡಲಾದ ಈ ವಿಡಿಯೋ 88,000 ಲೈಕ್ಸ್ ಮತ್ತು 11,500 ಶೇರ್‌ಗಳನ್ನು ಕಂಡಿದೆ. 
 
'ಮದುವೆ ಅಂದರೆ ನನಗೆ ಹುಟ್ಟುಹಬ್ಬ ಇದ್ದಂತೆ. ಆದರೆ ನನ್ನ ಈ ಮದುವೆಗೆ ಅಪ್ಪ ಒಪ್ಪುವುದಿಲ್ಲ', ಎಂದು ನಿತ್ಯಾ ವಿಡಿಯೋದಲ್ಲಿ ಹೇಳಿದ್ದು, ಆಕೆಯ ಅಮ್ಮ ಈ ಪೋಸ್ಟ್‌ನ್ನು ಪ್ರಕಟಿಸಿದ್ದಾಳೆ. 
 
ಮುದ್ದು ಬಾಲೆ 'ಮುನ್ನಿ ಬದನಾಮ್ ಹುಯೀ' ಹಾಡಿಗೆ ಹೆಜ್ಜೆ ಹಾಕುವ ಮೂಲಕವೂ ಗಮನ ಸೆಳೆದಿದ್ದಾಳೆ. 

ವೆಬ್ದುನಿಯಾವನ್ನು ಓದಿ