ಬೆಂಗಳೂರು: ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ನಟಿ ರನ್ಯಾ ರಾವ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಕಡ್ಡಾಯ ರಜೆಯಲ್ಲಿದ್ದ ಪೊಲೀಸ್ ಮಹಾನಿರ್ದೇಶಕ ಕೆ. ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ಮರುನೇಮಕ ಮಾಡಿದೆ.
ಡಿಜಿಪಿ ರಾವ್ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಮೇಲ್ದರ್ಜೆಗೇರಿಸಲಾಗಿದೆ.
ಅಧಿಸೂಚನೆಯಲ್ಲಿ ರಾಜ್ಯ ಸರ್ಕಾರವು ಡಿಜಿಪಿ (ಡಿಸಿಆರ್‌ಇ) ಐಪಿಎಸ್ (ವೇತನ) ನಿಯಮಗಳು 2016ರ ನಿಯಮ 12ರ ಅಡಿಯಲ್ಲಿ ಸಿಐಡಿ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ಮಹಾನಿರ್ದೇಶಕ ಹುದ್ದೆಗೆ ಸಮಾನವಾಗಿದೆ ಎಂದು ಹೇಳಿದೆ.
ವಿದೇಶದಿಂದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದದ್ದ ನಟಿ ರನ್ಯಾ ರಾವ್‌ಬಂಧನದ ನಂತರ ಅವರ ಮಲ ತಂದೆ ರಾಮಚಂದ್ರ ರಾವ್ ಅವರ ಅಧಿಕಾರವನ್ನು ಬಳಸಿಕೊಂಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಪೊಲೀಸ್ ಪ್ರೋಟೋಕಾಲ್ ಸೇವೆಗಳ ದುರುಪಯೋಗ ಮತ್ತು ಪ್ರಕರಣದಲ್ಲಿ ಡಿಜಿಪಿ ರಾವ್ ಅವರ ಸಂಭಾವ್ಯ ಪಾತ್ರವನ್ನು ತನಿಖೆ ಮಾಡಲು ಗೌರವ್ ಗುಪ್ತಾ ಸಮಿತಿಯನ್ನು ರಚಿಸಲಾಯಿತು. ಹೀಗಾಗಿ ಮಾರ್ಚ್ 15ರಂದು ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಯಿತು.
ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ ವಿಷಯವನ್ನು ನಿರ್ವಹಿಸುವ ಸಲಹಾ ಮಂಡಳಿಯು ಇತ್ತೀಚೆಗೆ ರಾವ್ ಅವರ ಬಂಧನದ ಸಂಪೂರ್ಣ ಅವಧಿಯಲ್ಲಿ ಅವರಿಗೆ ಜಾಮೀನು ನೀಡಲಾಗುವುದಿಲ್ಲ ಎಂದು ತೀರ್ಪು ನೀಡಿತು.