ನಟ ಅನಿರುದ್ಧ್ ರಿಂದ ಮುಖ್ಯಮಂತ್ರಿಗೊಂದು ಮನವಿ

ಗುರುವಾರ, 31 ಡಿಸೆಂಬರ್ 2020 (10:47 IST)
ಬೆಂಗಳೂರು: ನಟ ಅನಿರುದ್ಧ್ ಇತ್ತೀಚೆಗಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಅದರಲ್ಲೂ ಕಸ ನಿರ್ವಹಣೆ ಬಗ್ಗೆ ಆಸಕ್ತಿ ತೆಗೆದುಕೊಂಡು ಬೆಂಗಳೂರನ್ನು ಕ್ಲೀನ್ ಸಿಟಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇರುತ್ತದೆ.


ಆಗಾಗ ಬೆಂಗಳೂರಿನ ಹಲವು ಕೊಳಚೆ ಪ್ರದೇಶಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಬಿಬಿಎಂಪಿ ಅಧಿಕಾರಿಗಳನ್ನು ಭೇಟಿಯಾಗಿ ಇಂತಹ ಪ್ರದೇಶಗಳ ಬಗ್ಗೆ ಅವರ ಗಮನ ಸೆಳೆದು ನಗರ ಶುಚಿಗೊಳಿಸುವ ನಿಟ್ಟಿನಲ್ಲಿ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ.


ಇದೀಗ ಅನಿರುದ್ಧ್ ಸಿಎಂ ಯಡಿಯೂರಪ್ಪನವರಿಗೆ ಇದೇ ವಿಚಾರವಾಗಿ ಮನವಿಯೊಂದನ್ನು ಮಾಡಿದ್ದಾರೆ. ಗುಜರಾತ್ ಮಾದರಿಯಂತೆ ನಗರದಲ್ಲಿರುವ ತೆರೆದ ಕಾಲುವೆಗಳನ್ನು ಮುಚ್ಚಿ ವಿದ್ಯುತ್ ಶಕ್ತಿ ಉತ್ಪಾದನೆಗೆ ಸೌರ ಫಲಕ ಅಳವಡಿಸುವುದು ಮತ್ತು ಎರಡೂ ಬದಿಗಳಲ್ಲಿ ಗೋಡೆ ಕಟ್ಟಿ ಅವುಗಳಲ್ಲಿ ಹೂ ಗಿಡಗಳನ್ನು ನೆಟ್ಟು ನಮ್ಮ ನಗರಕ್ಕೆ ಸುಂದರ ಮೆರುಗು ತರುವ ಯೋಜನೆ ಬಗ್ಗೆ ಅನಿರುದ್ಧ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಇದು ನಮ್ಮ ದೇಶದ ಗುಜರಾತ್ ರಾಜ್ಯದಲ್ಲಿ ಈಗಾಗಲೇ ಯಶಸ್ವಿಯಾಗಿ ಜಾರಿಯಾಗಿದೆ. ಬೆಂಗಳೂರಲ್ಲೂ ಎಷ್ಟೋ ತೆರೆದ ಕಾಲುವೆಗಳಿವೆ. ಅದನ್ನು ಈ ರೀತಿಯಾಗಿ ಮುಚ್ಚುವುದರಿಂದ ಅಪಾಯಕಾರಿ ಸ್ಥಿತಿಯಲ್ಲಿರುವ ಕಾಲುವೆಗಳನ್ನು ಮುಚ್ಚಿದಂತಾಗುತ್ತದೆ ಮತ್ತು ವಿದ್ಯುತ್ ಶಕ್ತಿಯೂ ಉತ್ಪಾದನೆಯಾದಂತಾಗುತ್ತದೆ. ಇದು ಆರ್ಥಿಕತೆಗೂ ಸಹಕಾರಿಯಾಗುತ್ತದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಸಿಎಂ ಯಡಿಯೂರಪ್ಪನವರಿಗೆ ಅನಿರುದ್ಧ್ ಮನವಿ ಮಾಡಿದ್ದಾರೆ.

ಈ ಮೊದಲು ಅನಿರುದ್ಧ್ ಸ್ವಚ್ಛತೆ ಬಗ್ಗೆ ಮಾಡಿರುವ ಮನವಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಮತ್ತು ಕ್ರಮ ಕೈಗೊಂಡಿದ್ದಾರೆ.  ತಮ್ಮ ಈ ಮನವಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಗಣನೆಗೆ ತೆಗೆದುಕೊಂಡು ಕಾರ್ಯಪ್ರವೃತ್ತರಾದರೆ ನಮ್ಮ ನಗರಕ್ಕೆ, ಪರಿಸರಕ್ಕೆ ಹಲವು ರೀತಿಯಲ್ಲಿ ಲಾಭವಾಗಲಿದೆ ಎಂಬುದು ಅವರ ಉದ್ದೇಶ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ