ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಅವಹೇಳನ ಮಾಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿರುವ ತೆಲುಗು ನಟ ವಿಜಯ ರಂಗರಾಜು ವಿರುದ್ಧ ವಿಷ್ಣುದಾದ ಕುಟುಂಬ ಕಾನೂನು ಕ್ರಮ ಜರುಗಿಸುತ್ತಾ? ಈ ಬಗ್ಗೆ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ವೆಬ್ ದುನಿಯಾಗೆ ಹೇಳಿಕೆ ನೀಡಿದ್ದಾರೆ.
ಇದಕ್ಕೂ ಮೊದಲು ಸಾಮಾಜಿಕ ಜಾಲತಾಣದ ಮೂಲಕ ವಿಷ್ಣುವರ್ಧನ್ ಕುಟುಂಬಸ್ಥರ ಪರವಾಗಿ ಹೇಳಿಕೆ ನೀಡಿದ್ದ ಅನಿರುದ್ಧ್ ಅವರ ಹೇಳಿಕೆಯಿಂದ ನಮಗೆ ತುಂಬಾ ನೋವಾಗಿದೆ. ಅಪ್ಪಾವ್ರು ಎಲ್ಲಾ ಕಲಾವಿದರಿಗೆ, ತಂತ್ರಜ್ಞರಿಗೆ ಗೌರವ ಕೊಡ್ತಾ ಇದ್ರು. ಎಷ್ಟೋ ಜನಕ್ಕೆ ಸಹಾಯ ಮಾಡಿದ್ದಾರೆ. ಸಹಾಯ ಮಾಡುವಾಗಲೂ ಯಾರಿಗೂ ಹೇಳಬೇಡಿ ಎಂದು ಮಾಡುತ್ತಿದ್ದರು. ಅವರು ಅಪ್ಪಾವ್ರ ಕಾಲರ್ ಹಿಡಿದ್ರು ಎಂದು ಹೇಳ್ತಿದ್ದಾರೆ. ಅವರು ಸಿಂಹದ ಕಾಲರ್ ಹಿಡಿಯಕ್ಕೆ ಸಾಧ್ಯವಾ? ಅವರು ಸತ್ಯ ಹೇಳುತ್ತಿದ್ದಾರೆ ಎಂದಾದರೆ ಅವರು ಬದುಕಿದ್ದಾಗಲೇ ಹೇಳಬಹುದಿತ್ತು. ಸತ್ಯಕ್ಕೆ ಧೈರ್ಯ, ಶಕ್ತಿ ಇರುತ್ತೆ. ಆಗ ಹೇಳಿಲ್ಲ ಎಂದ್ರೆ ಅದರಲ್ಲಿ ಸತ್ಯವಿಲ್ಲ ಎಂದರ್ಥ. ಸುಮ್ನೇ ಮೀಸೆ ಬೆಳೆಸಿಕೊಂಡ್ರೆ ಧೈರ್ಯಶಾಲಿ ಅಂತಲ್ಲ. ಯಾರ ಬಗ್ಗೆ ಮಾತಾಡ್ತಿದ್ದಾರೆ ಅವರು? ಕರ್ನಾಟಕದ ಒಬ್ಬ ಮೇರು ನಟನ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ಅದು ಇಡೀ ಕರ್ನಾಟಕದ ಜನತೆಗೆ ಅವಮಾನ ಮಾಡಿದ ಹಾಗೆ. ದಯವಿಟ್ಟು ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತೇನೆ. ತೆಲುಗು ಚಿತ್ರರಂಗದವರು ಈ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಈ ವ್ಯಕ್ತಿಗೆ ಕೇಳಿಕೊಳ್ತೀನಿ, ದಯವಿಟ್ಟು ನೀವು ಇಲ್ಲಿಗೆ ಬರ್ಬೇಡಿ. ಬಂದ್ರೆ ಅಪ್ಪಾವ್ರ ಅಭಿಮಾನಿಗಳು ಸಿಂಹಗಳು, ಸಿಂಹಿಣಿಯರು ನಿಮಗೇನು ಮಾಡ್ತಾರೆ ನಾನು ಹೇಳಕ್ಕೆ ಆಗಲ್ಲ. ನಮ್ಮನ್ನು ಶಾರೀರಿಕವಾಗಿ ಬಿಟ್ಟುಹೋದ ವ್ಯಕ್ತಿ ಮಾತಾಡಬೇಕಾದ್ರೆ ಸಂಪೂರ್ಣವಾಗಿ ತಿಳಿದುಕೊಂಡು ಮಾತಾಡಬೇಕು. ಏನೂ ತಿಳಿಯದೇ ಮಾತಾಡಿದ್ದು ಶೋಚನೀಯ. ನಾವೆಲ್ಲಾ ಭಾರತೀಯರು. ಎಲ್ಲರೂ ಒಂದೇ. ಕೆಟ್ಟ ವ್ಯಕ್ತಿಗಳ ಬಗ್ಗೆ ಕ್ರಮ ಕೈಗೊಳ್ಳಲೇಬೇಕು. ಯಾರೋ ಏನೋ ಹೇಳಿದರೆಂದು ನಾವು ಬೇಸರವಾಗಬೇಕಿಲ್ಲ. ಅಪ್ಪಾವ್ರ ಬೆಲೆ ಕಡಿಮೆಯಾಗಲ್ಲ. ಅವರು ಏನು ಎಂದು ನಮಗೆಲ್ಲೆರಿಗೂ ಗೊತ್ತಿದೆ. ಅವರ ಸ್ಥಾನ ಶಾಶ್ವತವಾಗಿ ನಮ್ಮ ಹೃದಯಲ್ಲಿರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.