ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಅವರ ಸಹಚರರನ್ನು ಇಂದು ಕೋರ್ಟ್ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. ಇದರೊಂದಿಗೆ 13 ವರ್ಷಗಳ ಬಳಿಕ ದಾಸ ದರ್ಶನ್ ಮತ್ತೆ ಜೈಲು ವಾಸ ಅನುಭವಿಸಲಿದ್ದಾರೆ.
2011 ರ ಪತ್ನಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ 28 ದಿನ ಕಳೆದಿದ್ದರು. ಅದಾದ ಬಳಿಕ ಈಗ ಮತ್ತೊಮ್ಮೆ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಇಂದು ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನಲೆಯಲ್ಲಿ ಅವರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.
ಇದಕ್ಕೆ ಮುನ್ನ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಎಲ್ಲಾ ರೀತಿಯ ವಿಚಾರಣೆ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಈಗ ಜುಲೈ 4 ರವರೆಗೆ ಅಂದರೆ 14 ದಿನಗಳಿಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ದರ್ಶನ್ ಜೊತೆಗೆ ಪೊಲೀಸ್ ಕಸ್ಟಡಿಯಲ್ಲಿದ್ದ ಪ್ರದೂಷ್, ವಿನಯ್, ಧನರಾಜ್ ಈಗ ಜೈಲುಪಾಲಾಗಿದ್ದಾರೆ. ಉಳಿದ ಆರೋಪಿಗಳನ್ನು ಮೊನ್ನೆಯೇ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು.
ಇದರ ನಡುವೆ ಕೆಲವು ಆರೋಪಿಗಳನ್ನು ಬೇರೆ ಜೈಲಿಗೆ ವರ್ಗಾಯಿಸಲು ಪೊಲೀಸರು ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಆರೋಪಿ ಪರ ವಕೀಲರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಈ ತೀರ್ಪನ್ನು ನ್ಯಾಯಾಧೀಶರು ಸೋಮವಾರಕ್ಕೆ ಕಾದಿರಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ದರ್ಶನ್ ರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗುತ್ತದೆ.