ಬೆಂಗಳೂರು: ಡಿ ಬಾಸ್ ಎಂದು ನಂಬಿ ಹಿಂದೆ ಹೋದ ಉಳಿದ ಆರೋಪಿಗಳು ಈಗ ಅಕ್ಷರಶಃ ಲಾಕ್ ಆಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಭಾವಿಗಳು ಹೇಗೋ ಲಾಯರ್ ನೇಮಿಸಿಕೊಂಡು ವಾದ ಮಾಡುತ್ತಿದ್ದಾರೆ. ಆದರೆ ಉಳಿದವರ ಕತೆ ಗೋವಿಂದ.
ಆರೋಪಿ ಪಟ್ಟಿಯಲ್ಲಿರುವ ಕೆಲವರಿಗೆ ನೇರವಾಗಿ ದರ್ಶನ್ ಜೊತೆ ಸಂಪರ್ಕವೇ ಇಲ್ಲ. ಆದರೆ ಇವರೆಲ್ಲರೂ ಈಗ ಡಿ ಬಾಸ್ ನೋಡುವ ಆಸೆಗೆ ಬಿದ್ದು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕೈ ಜೋಡಿಸಿ ಲಾಕ್ ಆಗಿದ್ದಾರೆ. ಈ ಕೇಸ್ ನಲ್ಲಿ ದರ್ಶನ್, ಪವಿತ್ರಾ ಗೌಡ, ರವಿ ಸೇರಿದಂತೆ ನಾಲ್ವರು ಆರೋಪಿಗಳ ಪರ ವಾದ ಮಂಡಿಸಲು ಪ್ರತ್ಯೇಕ ಲಾಯರ್ ನೇಮಿಸಲಾಗಿದೆ. ಆದರೆ ಉಳಿದ ಕೆಲವು ಆರೋಪಿಗಳು ತೀರಾ ಬಡತನದಲ್ಲಿದ್ದಾರೆ.
ಈ ಆರೋಪಿಗಳ ಆದಾಯವನ್ನೇ ನಂಬಿ ಕುಟುಂಬ ನಡೆಯುತ್ತಿತ್ತು. ಈಗ ಆರೋಪಿಗಳಾಗಿರುವುದರಿಂದ ಇವರ ಪರವಾಗಿ ನಿಲ್ಲಲು ಯಾರೂ ಇಲ್ಲ. ಲಾಯರ್ ನೇಮಿಸಲೂ ಹಣವಿಲ್ಲ ಎಂಬ ಪರಿಸ್ಥಿತಿಯಾಗಿದೆ. ದರ್ಶನ್ ಮೇಲಿನ ಅಭಿಮಾನ ಎಂದುಕೊಂಡು ಹಿಂದೆ ಹೋದ ಬಡಪಾಯಿಗಳ ಪಾಡು ಕೇಳುವವರೇ ಇಲ್ಲ ಎಂದಾಗಿದೆ.
ಪ್ರಕರಣದಲ್ಲಿ ಆರೋಪಿಯಾಗಿರುವ ನಂದೀಶ್ ಕುಟುಂಬ ಮಾಧ್ಯಮಗಳ ಮುಂದೆ ತಮ್ಮ ದುಸ್ಥಿತಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ನಮಗೆ ಲಾಯರ್ ನೇಮಿಸಬೇಕೆಂದರೆ ಯಾರಾದರೂ ಸಹಾಯ ಮಾಡಬೇಕು. ನಮ್ಮ ಕುಟುಂಬ ಅವನ ದುಡಿಮೆಯಿಂದಲೇ ನಡೆಯುತ್ತಿತ್ತು ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಅಭಿಮಾನ ಎಂದು ಮಾಡಬಾರದ ಕೆಲಸಕ್ಕೆ ಕೈ ಜೋಡಿಸಲು ಹೋಗಿ ಈಗ ಈ ಬಡಪಾಯಿಗಳ ಸ್ಥಿತಿ ಕೇಳುವವರೇ ಇಲ್ಲ ಎಂಬಂತಾಗಿದೆ.