ಹೈದರಾಬಾದ್: ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಕಾಲ್ತುಳಿತದಲ್ಲಿ ಗಾಯಗೊಂಡ ಹುಡುಗನನ್ನು ಇಂದು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲು ಅರ್ಜುನ್ ಆರೋಗ್ಯ ವಿಚಾರಿಸಿದ್ದಾರೆ.
ಪುಷ್ಪ 2 ಸಿನಿಮಾ ರಿಲೀಸ್ ವೇಳೆ ಸಂಧ್ಯಾ ಥಿಯೇಟರ್ ಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದರೆ ಆಕೆಯ ಪುತ್ರ ಶ್ರೀತೇಜ್ ಗಂಭೀರ ಗಾಯಗೊಂಡಿದ್ದ.
ಈತ ಕಳೆದ ಒಂದು ತಿಂಗಳಿನಿಂದ ಸಿಕಂದರಾಬಾದ್ ನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂದು ಬೆಳಿಗ್ಗೆ ಅಲ್ಲು ಅರ್ಜುನ್ ತಮ್ಮ ಸಂಗಡಿಗರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಶ್ರೀತೇಜ್ ಕುಟುಂಬಸ್ಥರನ್ನೂ ಭೇಟಿ ಮಾಡಿದ ಅಲ್ಲು ಅರ್ಜುನ್, ನಿಮ್ಮ ಜೊತೆಗೆ ನಾನಿದ್ದೇನೆ, ಹೆದರಬೇಡಿ ಎಂದು ಭರವಸೆ ನೀಡಿ ಬಂದಿದ್ದಾರೆ.
ಅಲ್ಲು ಅರ್ಜುನ್ ಭೇಟಿ ಹಿನ್ನಲೆಯಲ್ಲಿ ಮತ್ತೆ ಅನರ್ಥವಾಗದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಅಲ್ಲು ಅರ್ಜುನ್ ಜೊತೆಗೆ ನಿರ್ಮಾಪಕ ದಿಲ್ ರಾಜು ಕೂಡಾ ಬಂದಿದ್ದರು. ಶ್ರೀತೇಜ್ ಕುಟುಂಬಕ್ಕೆ ಈಗಾಗಲೇ ಅಲ್ಲು ಅರ್ಜುನ್ ಪರಿಹಾರ ಹಣ ಘೋಷಣೆ ಮಾಡಿದ್ದರು.