ಸಾಹಸಸಿಂಹ ವಿಷ್ಣುವರ್ಧನ್ ಹೆಸರು ನೆನಪೇ ಆಗಲ್ವಾ ನಿಮ್ಗೆ? ನಟ ಅನಿರುದ್ಧ್ ಬೇಸರ
ಶನಿವಾರ, 19 ಜೂನ್ 2021 (11:28 IST)
ಬೆಂಗಳೂರು: 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಅಸಂಖ್ಯಾತ ಅಭಿಮಾನಿಗಳ ಪಾಲಿಗೆ ಆರಾಧ್ಯದೇವರಾಗಿರುವವರು ಸಾಹಸಸಿಂಹ ವಿಷ್ಣುವರ್ಧನ್. ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಅವರೂ ಒಬ್ಬರು. ಆದರೆ ದುರದೃಷ್ಟವಶಾತ್ ಬದುಕಿದ್ದಾಗಲೂ, ಈಗಲೂ ಅವರಿಗೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ ಎನ್ನುವುದು ವಿಪರ್ಯಾಸ.
ಈಗ ಅಂತಹದ್ದೇ ತಾರತಮ್ಯದ ವಿರುದ್ಧ ಅವರ ಅಳಿಯ, ನಟ ಅನಿರುದ್ಧ್ ಅಭಿಮಾನಿಗಳ ಮುಂದೆ ಬೇಸರ ಹೊರಹಾಕಿದ್ದಾರೆ. ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಟ್ಟಡದ ಮೇಲೆ ಡಾ.ರಾಜ್ ಕುಮಾರ್, ಡಾ. ಅಂಬರೀಶ್ ಅವರ ಹೆಸರಿದೆ. ಆದರೆ ಸಾಹಸಸಿಂಹ ಡಾ. ವಿಷ್ಣುವರ್ಧನ್ ಹೆಸರಿನ ಉಲ್ಲೇಖವೇ ಇಲ್ಲ. ಈ ಬಗ್ಗೆ ಅನಿರುದ್ಧ್ ಬೇಸರ ಹೊರಹಾಕಿದ್ದಾರೆ.
ಕರ್ನಾಟಕ ಕಲಾವಿದರ ಸಂಘದ ಕಟ್ಟಡದ ಮೇಲೆ ಡಾ.ರಾಜಕುಮಾರ್, ಡಾ. ಅಂಬರೀಶ್ ಅವರ ಹೆಸರಿದೆ. ಅವರಿಬ್ಬರೂ ಚಿತ್ರರಂಗಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು. ಅವರ ಹೆಸರಿಡುವುದು ಅತ್ಯಂತ ಸೂಕ್ತ. ಆದರೆ ನನಗೆ ತುಂಬಾ ಬೇಜಾರೆಂದರೆ ಅಲ್ಲಿ ಅಪ್ಪಾವ್ರು ಸಾಹಸಸಿಂಹ ಡಾ. ವಿಷ್ಣುವರ್ಧನ್ ಹೆಸರಿಲ್ಲ. ಇದರ ಬಗ್ಗೆ ನಾನು ಭಾರತಿ ಅಮ್ಮನ ಬಳಿ ಅಧಿಕಾರಿಗಳಿಗೆ ಕೇಳಲಾ ಎಂದು ಮಾತನಾಡಿದೆ. ಆದರೆ ಅವರು ಬೇಡ, ಅಧಿಕಾರಿಗಳಿಗೆ ಮುಂದೊಂದು ದಿನ ಗೊತ್ತಾಗಬಹುದು ಎಂದರು. ಆದರೆ ಸುಮಾರು ತಿಂಗಳುಗಳೇ ಆಗಿದೆ.
ಈ ವಿಚಾರ ಕಲಾವಿದರಿಗೆ, ಅಧಿಕಾರಿಗಳಿಗೆ ಬರ್ತಾನೇ ಇಲ್ಲ. ಇತ್ತೀಚೆಗೆ ಅಭಿಮಾನಿಗಳೂ ನೀವ್ಯಾಕೆ ಇದರ ಬಗ್ಗೆ ಮಾತಾಡ್ತಿಲ್ಲ ಎಂದು ಪ್ರಶ್ನೆ ಮಾಡ್ತಿದ್ದಾರೆ. ನಾವಾಗಿಯೇ ಕೇಳೋದು ಬೇಡ ಎಂದು ಸುಮ್ಮನಿದ್ದೆವು. ಆದರೆ ಈಗ ನಾವಾಗಿಯೇ ಕೇಳದೇ ಸಿಗಬೇಕಾದ ಗೌರವ ಸಿಗಲ್ಲ ಎನಿಸುತ್ತಿದೆ.
ಅಪ್ಪಾವ್ರು ನಮ್ಮ ಜೊತೆ ಶಾರೀರಿಕವಾಗಿ ಇದ್ದಾಗ, ನಿಮಗೆ ಪದ್ಮಶ್ರೀ ಬರಬೇಕಿತ್ತು, ದಾದಾಸಾಹೇಬ್ ಫಾಲ್ಕೆ ಬರಬೇಕಿತ್ತು ಎಂದು ನಾನು ಹೇಳುತ್ತಲೇ ಇದ್ದೆ. ಆಗೆಲ್ಲಾ ಅವರು ನಾವು ಏನೂ ಎಕ್ಸೆಪ್ಟ್ ಮಾಡಬಾರದು, ಆಕ್ಸೆಪ್ಟ್ ಮಾಡಬೇಕು ಅಂತ. ಆದರೆ ಅವರು ದೊಡ್ಡ ಕಲಾವಿದರು. ನಿರೀಕ್ಷೆ ಮಾಡ್ತಿರಲಿಲ್ಲ. ಆದರೆ ಅಪ್ಪಾವ್ರಿಗೆ ಸಿಗಬೇಕಾದ ಗೌರವ ಸಿಗಲೇಬೇಕು.
ಪುತ್ಥಳಿ ಬೇಕೆಂದ್ರೆ ಸಹಿ ಸಂಗ್ರಹಿಸಿಕೊಡಿ!
ಈ ವಿಚಾರವನ್ನು ಸಂಬಂಧಪಟ್ಟವರೊಂದಿಗೆ ಮಾತನಾಡುವ ಬದಲು ಅಭಿಮಾನಿಗಳ ಮುಂದೆ ಹಂಚಿಕೊಳ್ಳಲು ಕಾರಣವಿದೆ. ನಾನು ಹಿಂದೆ ಕೂಡಾ ವಾಣಿಜ್ಯ ಮಂಡಳಿಯಲ್ಲಿ ಅಪ್ಪಾವ್ರ ಪುತ್ಥಳಿ ಇಡಬೇಕು ಎಂದು ಪ್ರಯತ್ನಪಟ್ಟಾಗ ಆಗಿನ ಅಧ್ಯಕ್ಷರು ಈವತ್ತು ಇವರು, ನಾಳೆ ಇನ್ನೊಬ್ಬರು ಬರ್ತಾರೆ. ಎಲ್ಲರ ಪುತ್ಥಳಿ ಇಡಲು ಜಾಗ ಸಾಕಾಗಲ್ಲ ಎಂದರು. ಆಗ ನಾನು ಅವರಿಗೆ ಹೇಳಿದ್ದೆ, ಕನ್ನಡ ಚಿತ್ರರಂಗ ಎಂದರೆ ಎರಡು ಹೆಸರುಗಳು ಬರ್ತಾವೆ. ಅದರಲ್ಲಿ ಒಬ್ಬರು ಡಾ. ರಾಜಕುಮಾರ್, ಇನ್ನೊಬ್ಬರು ಡಾ. ವಿಷ್ಣುವರ್ಧನ್. ಡಾ. ರಾಜಕುಮಾರ್ ಗೆ ಸಲ್ಲಬೇಕಾದ ಎಲ್ಲಾ ಗೌರವ ಸಲ್ಲಲೇಬೇಕು. ಆದರೆ ಅಪ್ಪಾವ್ರಿಗೂ ಸಿಗಬೇಕಲ್ಲ?
ಕೊನೆಗೆ ಅವರು ಒಂದು ವೇಳೆ ಅವರ ಪುತ್ಥಳಿ ಬರಬೇಕೆಂದರೆ ಅಭಿಮಾನಿಗಳ ಸಂಗ್ರಹಿಸಿಕೊಡಿ ಎಂದರು. ನನಗೆ ಇದು ತುಂಬಾ ಬೇಜಾರಾಯ್ತು. ಆದ್ರೂ ಸಹ, ನಾನು ಸಂಗ್ರಹಿಸಿ ಕೊಟ್ಟೆ. ಆದರೂ ಪುತ್ಥಳಿ ಆಗಲೇ ಇಲ್ಲ. ಅದಕ್ಕೆ ಏನೇನೋ ಕಾರಣಗಳು ಇರಬಹುದು. ಈಗ ಕಲಾವಿದರ ಸಂಘಕ್ಕೂ ಅವರ ಹೆಸರಿಲ್ಲ. ಅವರು ಅಧಿಕೃತವಾಗಿ ಅಧ್ಯಕ್ಷರಾಗಿರದೇ ಇರಬಹುದು. ಆದರೆ ಕಲಾವಿದರ ಸಂಘದ ಎಷ್ಟೋ ಸಾಮಾಜಿಕ ಸೇವೆಗಳಲ್ಲಿ ಪಾಲ್ಗೊಂಡಿದ್ದಾರೆ, ಮುಂದಾಳತ್ವ ತೆಗೆದುಕೊಂಡಿದ್ದಾರೆ. ಇದನ್ನು ನಾನೇ ನೋಡಿದ್ದೇನೆ. ಮನೆಯಲ್ಲೇ ಸಾಕಷ್ಟು ಬಾರಿ ಮೀಟಿಂಗ್ ಆಗಿದೆ. ಅವರು ಕಾಣೋದೇ ಇಲ್ವಾ ನಿಮಗೆ? ಅವರು ನೆನಪಿಗೇ ಬರೋದಿಲ್ವಾ? ಇದನ್ನು ನಾನು ಕುಟುಂಬದ ಸದಸ್ಯನಾಗಿ ಕೇಳಬೇಕಾ?
ಅಲ್ಲಿ ಬೋರ್ಡ್ ನೋಡಿದಾಗ ಅಪ್ಪಾವ್ರ ಹೆಸರೇ ಇಲ್ವಲ್ಲಾ? ನಿಮಗೆ ಏನು ಅನಿಸೋದೇ ಇಲ್ವಾ? ಕೆಲವರು ಇನ್ನಷ್ಟು ಸಹ ಕಲಾವಿದರ ಹೆಸರಿಲ್ಲ, ನಟಿಯರ ಹೆಸರಿಲ್ಲ ಎಂದು ಹೇಳಬಹುದು. ಆದರೆ ಕಲಾವಿದರ ಸಂಘ ಎಂದರೆ ಅಲ್ಲಿ ಅಪ್ಪಾವ್ರ ಹೆಸರಿರಲೇಬೇಕು. ಅಪ್ಪಾವ್ರ ಹೆಸರನ್ನು ಮರೆಯುವ ಹಾಗೇ ಇಲ್ಲ. ಇದನ್ನು ಚಲನಚಿತ್ರ ಸಂಘದ ಸದಸ್ಯನಾಗಿ, ಅಭಿಮಾನಿಯಾಗಿ, ಕಲಾವಿದನಾಗಿ, ಕುಟುಂಬದ ಸದಸ್ಯನಾಗಿ ಕಲಾವಿದರ ಸಂಘದ ಅಧಿಕಾರಿಗಳಿಗೆ ಮತ್ತು ಕಲಾವಿದರಿಗೆ ಕೇಳ್ತಿದ್ದೇನೆ ಎಂದು ಅನಿರುದ್ಧ್ ಆಕ್ರೋಶ ಹೊರಹಾಕಿದ್ದಾರೆ.