ವಿಷ್ಣು ಕುಟುಂಬದ ಕ್ರೆಡಿಟ್ ನೀವೇ ತೆಗೆದುಕೊಳ್ಳುತ್ತೀರಿ ಎಂದ ನೆಟ್ಟಿಗನಿಗೆ ಅನಿರುದ್ಧ್ ತಪರಾಕಿ
ಬುಧವಾರ, 18 ಜನವರಿ 2023 (09:20 IST)
WD
ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋ ವಿವಾದ ಇತ್ತೀಚೆಗೆ ಸದ್ದು ಮಾಡಿತ್ತು. ಈ ಸಮಾಧಿ ತೆರವುಗೊಳಿಸಲಾಗುತ್ತದೆ ಎಂಬ ಸುದ್ದಿ ಅಭಿಮಾನಿಗಳನ್ನು ರೊಚ್ಚಿಗೇಳಿಸಿತ್ತು.
ಇದರ ಬಗ್ಗೆ ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ್ ಜತ್ಕಾರ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪ್ರಕಟಿಸಿ ನಾವು ಅಭಿಮಾನಿಗಳ ಜೊತೆ ಇದ್ದೇವೆ ಎಂದು ಸಂದೇಶ ನೀಡಿದ್ದರು. ಅವರ ಈ ಮಾತನ್ನು ಅಭಿಮಾನಿಗಳು ಸ್ವಾಗತಿಸಿದ್ದರು.
ಇದರ ನಡುವೆ ನೆಟ್ಟಿಗರೊಬ್ಬರು ಅನಿರುದ್ಧ್ ಗೆ ನಿಮಗೆ ನಾಚಿಕೆಯಾಗಬೇಕು. ವಿಷ್ಣು ಕುಟುಂಬದ ಕ್ರೆಡಿಟ್ ನೀವೇ ತೆಗೆದುಕೊಳ್ಳುತ್ತೀರಿ. ವಿಷ್ಣುರ್ಧವನ್ ಅವರು ಇಬ್ಬರು ಪುತ್ರಿಯರನ್ನು ದತ್ತು ಪಡೆದಿದ್ದರು. ಅವರಲ್ಲಿ ಎರಡನೇ ಪುತ್ರಿ ಚಂದನಾ ಅವರನ್ನು ನೀವು ಮೂಲೆಗುಂಪು ಮಾಡಿದ್ದೀರಿ. ಎಲ್ಲದರಲ್ಲೂ ನೀವೇ ಕಾಣಿಸಿಕೊಳ್ಳುತ್ತಿದ್ದೀರಿ ಎಂದೆಲ್ಲಾ ಹರಿಹಾಯ್ದಿದ್ದರು.
ಇದು ಅನಿರುದ್ಧ್ ಜತ್ಕಾರ್ ರನ್ನು ಕೆರಳಿಸಿದೆ. ನಿಮಗೆ ಇಂತಹ ಕಾಮೆಂಟ್ ಮಾಡಲು ನಾಚಿಕೆಯಾಗಬೇಕು. ವಿಷ್ಣುವರ್ಧನ್ ಅವರು ದತ್ತು ಪಡೆದಿದ್ದು ನಿಜವಿರಬಹುದು. ಆದರೆ ಅವರನ್ನು ಎಂದೂ ದತ್ತು ಪುತ್ರಿಯರು ಎಂಬಂತೆ ನೋಡಿಲ್ಲ. ಇಂತಹ ಪದ ಬಳಕೆ ಮಾಡಿ ನೋವುಂಟು ಮಾಡಬೇಡಿ. ಹೌದು, ಇಬ್ಬರೂ ದತ್ತು ಪುತ್ರಿಯರೇ. ಆದರೆ ಅವರಿಬ್ಬರೂ ಭಾರತಿ ಅಮ್ಮನವರ ಸಹೋದರಿಯ ಮಕ್ಕಳು. ಚಂದನಾ ಎರಡನೇ ಪುತ್ರಿಯಲ್ಲ. ಹಿರಿಯಾಕೆ. ನಿಮಗೆ ಈ ವಿಚಾರವೇ ಗೊತ್ತಿಲ್ಲ. ಮತ್ತೆ ಹೀಗೆಲ್ಲಾ ಕಾಮೆಂಟ್ ಮಾಡುತ್ತೀರಿ. ಚಂದನಾ ಮತ್ತು ಆಕೆಯ ಪತಿ ಮಾಧ‍್ಯಮಗಳ ಮುಂದೆ ಮಾತನಾಡಲು ಇಷ್ಟಪಡಲ್ಲ. ಹೀಗಾಗಿ ಅವರು ಬರಲ್ಲ ಅಷ್ಟೇ. ನಾವೆಲ್ಲಾ ಒಟ್ಟಾಗಿಯೇ ಇದ್ದೇವೆ. ನೀವು ಇಂತಹ ಕಾಮೆಂಟ್ ಮಾಡಿರುವುದಕ್ಕೆ ನಾನು ನಿಮ್ಮದೇ ಭಾಷೆಯಲ್ಲಿ ಉತ್ತರಿಸಬೇಕಾಯಿತು ಎಂದು ಕಿಡಿ ಕಾರಿದ್ದಾರೆ.