ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಇಷ್ಟು ಸೀಸನ್ ಗಳ ಕಾಲ ಕಾಮಿಡಿ ಕಿಲಾಡಿಗಳು ಶೋ ಅವಿಭಾಜ್ಯ ಅಂಗವಾಗಿದ್ದ ಮಾಸ್ಟರ್ ಆನಂದ್ ಇನ್ನು ಆ ಶೋನಲ್ಲಿ ಇರಲ್ಲ ಎನ್ನಲಾಗುತ್ತಿದೆ.
ಜೀ ಕನ್ನಡ ವಾಹಿನಿಯ ಜನಪ್ರಿಯ ಶೋಗಳಲ್ಲಿ ಕಾಮಿಡಿ ಕಿಲಾಡಿಗಳು ಕೂಡಾ ಒಂದು. ಈಗಾಗಲೇ ನಾಲ್ಕು ಸೀಸನ್ ಮುಗಿಸಿರುವ ಕಾಮಿಡಿ ಕಿಲಾಡಿಗಳು ಶೋ ಅನೇಕ ಕಲಾವಿದರನ್ನು ಸ್ಯಾಂಡಲ್ ವುಡ್ ಗೆ ನೀಡಿದೆ. ಇವರಲ್ಲಿ ಶಿವರಾಜ್ ಕೆಆರ್ ಪೇಟೆ, ಅಪ್ಪಣ್ಣ, ಮನು, ರಾಕೇಶ್ ಪೂಜಾರಿ ಮುಂತಾದವರು ಸ್ಯಾಂಡಲ್ ವುಡ್ ನಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
ಇದೀಗ ಕಾಮಿಡಿ ಕಿಲಾಡಿಗಳು ಸೀಸನ್ 5 ಬರುತ್ತಿದೆ. ಕಳೆದ ನಾಲ್ಕು ಸೀಸನ್ ಗಳಲ್ಲಿ ಮಾಸ್ಟರ್ ಆನಂದ್ ಶೋ ನಿರೂಪಕರಾಗಿದ್ದರು. ಆದರೆ ಈಗ ಐದನೇ ಸೀಸನ್ ನ ಆರಂಭವಾಗುತ್ತಿದೆ ಎಂಬ ಪ್ರೋಮೋ ಜೀ ವಾಹಿನಿ ಹೊರಬಿಟ್ಟಿದ್ದು, ಅದರಲ್ಲಿ ಆನಂದ್ ಸ್ಥಾನದಲ್ಲಿ ನಿರಂಜನ್ ದೇಶಪಾಂಡೆ ಕಂಡುಬಂದಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಮಾಸ್ಟರ್ ಆನಂದ್ ನಿರೂಪಣೆ ಮಾಡುವುದು ಅಪರೂಪವಾಗಿದೆ. ಇದೀಗ ಕಾಮಿಡಿ ಕಿಲಾಡಿಗಳು ಶೋನಿಂದಲೂ ಅವರು ಹೊರಬಂದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಹೀಗಾಗಿ ಪ್ರೋಮೋ ನೋಡಿದ ಪ್ರೇಕ್ಷಕರು ಯಾಕೆ ಆನಂದ್ ಸರ್ ಇಲ್ಲ? ಅವರು ಈ ಶೋಗೆ ಬೆಸ್ಟ್ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಈಗ ಆನಂದ್ ಅವರೇ ಉತ್ತರ ಕೊಡಬೇಕಿದೆ.