ಬೆಂಗಳೂರು: ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದ ಸಿನಿಮಾ ಬಿಡುಗಡೆಯಾದ ಒಂದೇ ವಾರಕ್ಕೆ ನಿಂತು ಹೋದರೆ ಸಿನಿಮಾ ತಂಡದವರ ಗತಿ ಏನಾಗಬೇಡ? ಅಂಜನಿ ಪುತ್ರ ತಂಡಕ್ಕೂ ಹಾಗೇ ಆಗಿತ್ತು. ಆದರೆ ಇದೀಗ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.
ಪುನೀತ್ ರಾಜ್ ಕುಮಾರ್ ಅಭಿನಯದ ಅಂಜನಿ ಪುತ್ರ ಬಿಡುಗಡೆಯಾದ ಕೆಲವೇ ದಿನಕ್ಕೆ ವಕೀಲರ ವಿರುದ್ಧ ಆಕ್ಷೇಪಾರ್ಹ ಸಂಭಾಷಣೆಯಿದೆ ಎಂಬ ಕಾರಣಕ್ಕೆ ವಕೀಲರ ಸಂಘ ಕೋರ್ಟ್ ನಿಂದ ತಡೆಯಾಜ್ಞೆ ತಂದಿತ್ತು.
ಇದರಿಂದಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದ ಸಿನಿಮಾಗೆ ದೊಡ್ಡ ಹೊಡೆತ ಬೀಳುವುದರಲ್ಲಿತ್ತು. ಆದರೆ ಇದೀಗ ನಿರ್ದೇಶಕ ಹರ್ಷ ವಕೀಲರ ಕ್ಷಮೆ ಕೇಳಿದ್ದು, ಚಿತ್ರದ ಅಗತ್ಯಕ್ಕೆ ತಕ್ಕುದಾಗಿ ಆ ಸಂಭಾಷಣೆ ಸೇರಿಸಲಾಗಿದೆ. ವಕೀಲರನ್ನು ನೋಯಿಸುವ ಉದ್ದೇಶವಿರಲಿಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲದೆ, ನ್ಯಾಯಾಲಯದಲ್ಲಿ ಚಿತ್ರ ತಂಡ ನಷ್ಟ ಅನುಭವಿಸುತ್ತಿರುವ ಕಾರಣದಿಂದ ತಡೆಯಾಜ್ಞೆ ತೆರವುಗೊಳಿಸುವಂತೆ ಅಫಿಡವಿಟ್ ಸಲ್ಲಿಸಲಾಗಿತ್ತು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂಬ ಎಚ್ಚರಿಕೆಯ ಜತೆಗೆ 25 ಸಾವಿರ ರೂ. ದಂಡ ವಿಧಿಸಿ ಚಿತ್ರದ ಮೇಲಿದ್ದ ತಡೆಯಾಜ್ಞೆ ತೆರವುಗೊಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ