ಬೆಂಗಳೂರು: ಕಿರುತೆರೆ ನಟಿ, ಖಾಸಗಿ ವಾಹಿನಿಯ ನಿರೂಪಕಿಗೆ ಪತಿಯೇ ಚಾಕುವಿನಿಂದ ಇರಿದ ಘಟನೆ ಇಂದು ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್‌ನಲ್ಲಿ ವರದಿಯಾಗಿದೆ.
ಇರಿತಕ್ಕೊಳಗಾದ ನಟಿಯನ್ನು ಶ್ರುತಿ ಎಂದು ಗುರುತಿಸಲಾಗಿದೆ. ಇವರು ಅಮೃತಧಾರೆ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಶ್ರುತಿ ನಟಿಸಿದ್ದಾರೆ. ಜುಲೈ 4 ರಂದು ಚೂರಿ ಇರಿದಿದ್ದು ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರುತಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂಬರೀಶ್ ಎಂಬವರನ್ನು 20 ವರ್ಷದ ಹಿಂದೆ ಮದುವೆಯಾಗಿದ್ದ ಶ್ರುತಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಲೀಸ್‌ಗೆ ಮನೆ ಪಡೆದು ದಂಪತಿ ಹನುಮಂತ ನಗರದಲ್ಲಿ ವಾಸವಾಗಿದ್ದರು. ಕೆಲ ತಿಂಗಳಿನಿಂದ ಶ್ರುತಿ ನಡವಳಿಕೆ ಗಂಡ ಅಂಬರೀಶ್‌ಗೆ ಇಷ್ಟವಾಗುತ್ತಿರಲಿಲ್ಲ. ಶೀಲವನ್ನು ಶಂಕಿಸಿ ಶ್ರುತಿ ಜತೆ ಅಂಬರೀಶ್ ಜಗಳವಾಡುತ್ತಿದ್ದರು.
ಇಬ್ಬರ ಮಧ್ಯೆ ಲೀಸ್ ಹಣಕ್ಕೆ ಸಂಬಂಧಿಸಿದಂತೆ ಆಗಾಗ ಜಗಳ ನಡೆಯುತ್ತಿತ್ತು. ಈ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಹಿಂದೆ ಶ್ರುತಿ ದೂರು ನೀಡಿದ್ದರು. ಇಬ್ಬರ ನಡುವೆ ಹೊಂದಾಣಿಕೆ ಸರಿ ಇಲ್ಲದ ಕಾರಣ ಕಳೆದ ಏಪ್ರಿಲ್‌ನಲ್ಲಿ ಪತಿಯಿಂದ ದೂರವಾಗಿ ಅಣ್ಣನ ಮನೆಯಲ್ಲಿ ಶ್ರುತಿ ನೆಲೆಸಿದ್ದರು.
ಜುಲೈ 3 ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಪತಿ, ಪತ್ನಿ ರಾಜಿಯಾಗಿ ಒಂದಾಗಿದ್ದರು. ಆದರೆ ಜುಲೈ 4 ರಂದು ಮಕ್ಕಳು ಕಾಲೇಜಿಗೆ ಹೋಗಿದ್ದಾಗ ಪೆಪ್ಪರ್ ಸ್ಪ್ರೇ ಮಾಡಿ ಪತ್ನಿಯ ಕೊಲೆಗೆ ಅಂಬರೀಶ್ ಯತ್ನಿಸಿದ್ದಾನೆ.
ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಸಿನಿಮಾ ಸ್ಟೈಲ್ ನಲ್ಲಿ ತಲೆ ಕೂದಲು ಹಿಡಿದು ಗೋಡೆ ತಲೆ ಗುದ್ದಿಸಿ ಕೊಲೆಗೆ ಅಂಬರೀಶ್ ಯತ್ನಿಸಿದ್ದಾನೆ.
ಸಂಸಾರ ಮತ್ತು ಹಣಕಾಸು ವಿಚಾರಕ್ಕೆ ಕೊಲೆ ಯತ್ನ ಮಾಡಿರುವುದಾಗಿ ಶ್ರುತಿ ದೂರು ನೀಡಿದ್ದು ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕೊಲೆಯತ್ನ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಅಂಬರೀಶ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.