ಬಳ್ಳಾರಿ: ಹತ್ಯೆ ಪ್ರಕರಣದಲಿ ನಟ ದರ್ಶನ್ಗೆ ಮಧ್ಯಂತರ ಜಾಮೀನು ಮಂಜೂರವಾಗುತ್ತಿದ್ದ ಹಾಗೇ ಅವರ ಅಭಿಮಾನಿಗಳಲ್ಲಿ, ಆಪ್ತ ವಲಯದಲ್ಲಿ ಸಂಭ್ರಮ ಮನೆ ಮಾಡಿದೆ. ಮತ್ತೊಂದೆಡೆ ದರ್ಶನ್ಗೆ ಬೇಲ್ ಸಿಗುತ್ತಿದ್ದ ಹಾಗೇ ದರ್ಶನ್ರನ್ನು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ.
ಆದರ ಬೆನ್ನಲ್ಲೇ ವಿಜಯಲಕ್ಷ್ಮಿ ಬಳ್ಳಾರಿಯ ದುರ್ಗಮ್ಮ ದೇವಾಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರುತ್ತಿದ್ದ ಹಾಗೇ ವಿಜಯಲಕ್ಷ್ಮಿ ಅವರು ದೇವರ ಮೊರೆ ಹೋಗುತ್ತಿದ್ದರು. ಕಾನೂನು ಪ್ರಕ್ರಿಯೆ ಜತೆಗೆ ದೇವರ ದರ್ಶನ ಮಾಡಿ ಆದಷ್ಟು ಬೇಗ ಈ ಪ್ರಕರಣದಿಂದ ದರ್ಶನ್ ಹೊರಬರಲಿ ಎಂದು ಪ್ರಾರ್ಥಿಸುತ್ತಿದ್ದರು.
ಈ ಹಿಂದೆ ಕೂಡಾ ಕೊಲ್ಲೂರು ಮೂಕಾಂಬಿಕೆ, ಮೈಸೂರು ಚಾಮುಂಡೇಶ್ವರಿ ದೇವಿ, ಕಾಮಾಕ್ಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಮಾಡಿ, ಹರಕೆ ಕಟ್ಟಿಕೊಂಡಿದ್ದರು.
ಇದೀಗ ದರ್ಶನ್ಗೆ ಜಾಮೀನು ಸಿಕ್ಕ ಖುಷಿಯಲ್ಲಿ ವಿಜಯಲಕ್ಷ್ಮಿ ದೇವಿಯ ದರ್ಶನ ಪಡೆದರು. ಜಾಮೀನು ಪ್ರಕ್ರಿಯೆಗಳು ೫ ಗಂಟೆಯೊಳಗೆ ಮುಗಿದರೆ, ಎಲ್ಲರೂ ಅಂದುಕೊಂಡ ಹಾಗೇ ಇಂದು ಸಂಜೆ ದರ್ಶನ್ ಜೈಲಿನಿಂದ ಬಿಡುಗಡೆಯಾಗವ ಸಾಧ್ಯತೆಯಿದೆ. ಇದೀಗ ಜೈಲಿನಿಂದ ಅಂತಿಮ ಹಂತದ ಪ್ರಕ್ರಿಯೆಗಳು ನಡೆಯುತ್ತಿದೆ.