ಇದರ ಬೆನ್ನಲ್ಲೇ ಈಗ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಮತ್ತು ಅಳಿಯ, ನಟ ಅನಿರುದ್ಧ ಜತಕರ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಅಭಿಮಾನಿಗಳಿಗಾಗಿ ಸಮಾಧಿ ಸ್ಥಳದಲ್ಲಿ 10 ಗುಂಟೆ ಜಾಗ ಬಿಟ್ಟುಕೊಡಿ ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.
ಇಂದು ಕಾವೇರಿ ನಿವಾಸದಲ್ಲಿ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಪತ್ರದಲ್ಲಿ ಮೈಸೂರಿನಲ್ಲಿ ಡಾ ವಿಷ್ಣುವರ್ಧನ್ ರವರ ಸ್ಮಾರಕವನ್ನು ನಿರ್ಮಿಸಿ ಕನ್ನಡಿಗರ ಹೃದಯದಲ್ಲಿ ವಿಷ್ಣುವರ್ಧನ್ ಅವರ ನೆನಪನ್ನು ಶಾಶ್ವತವಾಗಿ ಉಳಿಸಿರುವ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು. ಆದರೆ ಬೆಂಗಳೂರಿನಲ್ಲಿಯೂ ಸ್ಮಾರಕದ ಅಗತ್ಯವಿದೆ ಎಂಬ ಅಭಿಮಾನಿಗಳ ಬೇಡಿಕೆಯಾಗಿದೆ. ಬೆಂಗಳೂರಿನಲ್ಲಿರುವ ಈ ಸ್ಥಳವು ಅಭಿಮಾನಿಗಳಿಗೆ ಭಾವನಾತ್ಮಕ ನೆನಪಿನ ಸ್ಥಳವೂ ಆಗಿದೆ. ಅಭಿಮಾನ್ ಸ್ಟುಡಿಯೋ ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಸರ್ಕಾರ ಘೋಷಿಸಿದೆ. ಹೀಗಾಗಿ ಅಭಿಮಾನ್ ಸ್ಟುಡಿಯೋ ವ್ಯಾಪ್ತಿಯಲ್ಲಿ 10 ಗುಂಟೆ ಜಾಗವನ್ನು ಮೀಸಲಿಟ್ಟು ಡಾ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ನೀಡಬೇಕೆಂದು ಕೇಳಿಕೊಳ್ಳುತ್ತೆನೆ ಎಂದು ಹೇಳಲಾಗಿದೆ.