ಅಂಥಾದ್ದೇ ಒಂದು ಗುಪ್ತ ಸಮಸ್ಯೆಯಿಂದ ಕಾಡಿಸಿಕೊಂಡು ಕಂಗಾಲಾದ ಪಾತ್ರವೊಂದರ ಸುತ್ತ ಬ್ರಹ್ಮಚಾರಿ ಚಿತ್ರ ಕಥೆ ಕದಲುತ್ತದೆ. ಉದಯ್ ಕೆ ಮೆಹ್ತಾ ನಿಮಾಣದಲ್ಲಿ ಮೂಡಿ ಬಂದಿರೋ ಈ ಚಿತ್ರದಲ್ಲಿ ನೀನಾಸಂ ಸತೀಶ್ ಮಜವಾದೊಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಯಾವುದೇ ಮುಜುಗರಕ್ಕೂ ಪ್ರೇಕ್ಷಕರು ತುತ್ತಾಗದಂಥಾ ರೀತಿಯಲ್ಲಿ ನಿರ್ದೇಶಕ ಚಂದ್ರಮೋಹನ್ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರಂತೆ.
ಈಗಾಗಲೇ ಫಸ್ಟ್ ನೈಟ್ ಟೀಸರ್, ಟ್ರೇಲರ್ ಮತ್ತು ಹಾಡುಗಳೊಂದಿಗೆ ಈ ಚಿತ್ರ ಸಖತ್ ಸೌಂಡು ಮಾಡಿದೆ. ಇದರಲ್ಲಿಯೇ ಸಂಸಾರಸ್ಥ ಬ್ರಹ್ಮಚಾರಿಯನ್ನು ಯಾವುದೋ ಗುಪ್ತವಾದ ಬಾಧೆಯೊಂದು ಕಾಡುತ್ತಿರುವ ಸುಳಿವುಗಳೂ ಸಿಕ್ಕಿವೆ. ಆದರೆ ಅಂಥಾ ಕಾಯಿಲೆಯನ್ನು ಕಿಂಡಲ್ಲು ಮಾಡದೆ, ಮನೋರಂಜನಾತ್ಮಕವಾಗಿ ಕಟ್ಟಿ ಕೊಡುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆಯಂತೆ. ಆರಂಭದಲ್ಲಿ ನಿರ್ದೇಶಕರು ಈ ಕಥಾ ಎಳೆಯನ್ನು ಹೇಳಿದಾಗ ಸತೀಶ್ ಅವರಲ್ಲಿ ಅದನ್ನು ಹೇಗೆ ಪ್ರೆಸೆಂಟ್ ಮಾಡಿರುತ್ತಾರೋ ಎಂಬ ಗುಮಾನಿ ಇತ್ತಂತೆ. ಆದರೆ ಎಲ್ಲವೂ ರೆಡಿಯಾದ ನಂತರ ಕಥೆ ಕೇಳಿದಾಕ್ಷಣವೇ ಅವರು ಖುಷಿಯಾಗಿ ಒಪ್ಪಿಕೊಂಡಿದ್ದರಂತೆ.
ಈ ಕಥೆಯನ್ನು ಸಿದ್ಧಪಡಿಸುವಾಗ ಬ್ರಹ್ಮಚಾರಿಯ ಪಾತ್ರ ಹೀಗೆಯೇ ಮೂಡಿ ಬರಬೇಕೆಂಬ ಆಸೆ ಚಂದ್ರ ಮೋಹನ್ ಅವರಲ್ಲಿತ್ತಂತೆ. ಬಳಿಕ ನೀನಾಸಂ ಸತೀಶ್ ಎಲ್ಲರ ಕಲ್ಪನೆಯನ್ನೂ ಮೀರಿಸುವಂತೆ ಈ ಪಾತ್ರದಲ್ಲಿ ನಟಿಸಿದ್ದಾರಂತೆ. ಅಷ್ಟಕ್ಕೂ ಸತೀಶ್ ಎಂಥಾದ್ದೇ ಪಾತ್ರಗಳಿಗಾದರೂ ಜೀವ ತುಂಬಬಲ್ಲ ನಟ. ಸಾಮಾನ್ಯವಾಗಿ ಅದೆಷ್ಟು ಥರದ ಪಾತ್ರಗಳನ್ನು ನಿರ್ವಹಿಸಿದವರಿಗೂ ಸಹ ಹಾಸ್ಯ ಸರ ಹೊಮ್ಮಿಸೋದು ಕಷ್ಟವಾಗುತ್ತೆ. ಆದರೆ ಸತೀಶ್ ಅವರಿಗದು ಕರತಲಾಮಲಕ. ಈ ಕಾರಣದಿಂದ ಬ್ರಹ್ಮಚಾರಿ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಅನ್ನೋದು ಚಿತ್ರತಂಡದ ಅಭಿಪ್ರಾಯ. ಅಂದಹಾಗೆ ಈ ಸಿನಿಮಾ ಈ ವಾರವೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.