ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿತು ಚಿಂಚನಸೂರ್ ಚೆಕ್ ಬೌನ್ಸ್ ಪ್ರಕರಣ

ಮಂಗಳವಾರ, 7 ಜುಲೈ 2015 (13:17 IST)
ರಾಜ್ಯದ ಜವಳಿ ಹಾಗೂ ಒಳನಾಡು ಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ ಅವರು ಎದುರಿಸುತ್ತಿರುವ ಚೆಕ್ ಬೌನ್ಸ್ ಪ್ರಕರಣವು ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿದ್ದು, ವಿಧಾನಸಭಾ ವಿರೋಧ ಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸಿ ಸಚಿವರ ರಾಜೀನಾಮೆಗೆ ಆಗ್ರಹಿಸಿದರು. 
 
ಕಲಾಪ ವೇಳೆಯಲ್ಲಿ ಮಾತನಾಡಿದ ಅವರು, ಮಹಿಳಾ ಉದ್ಯಮಿಯೋರ್ವರಿಂದ ಸಚಿವರು ಹಣ ಪಡೆದಿದ್ದು, ಹಣವನ್ನು ಮತ್ತೆ ಹಿಂದಿರುಗಿಸುತ್ತಿಲ್ಲ. ಬೌನ್ಸ್ ಆಗಿರುವ ಚೆಕ್‌ನ್ನು ವಿತರಿಸಿದ್ದಾರೆ. ಅಲ್ಲದೆ ಚೆಕ್ ಬೌನ್ಸ್ ಹಿನ್ನೆಲೆಯಲ್ಲಿ ಹಣವನ್ನು ಕೊಡುವಂತೆ ಮಹಿಳೆ ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಆಕೆಗೆ ಜೀವಬೆದರಿಕೆಯನ್ನೂ ಕೂಡ ಸಚಿವರು ಹಾಕುತ್ತಿದ್ದಾರಂತೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ವಿರುದ್ಧ ದೂರೂ ಕೂಡ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರಾಗಿ ಮುಂದುವರಿಯಲು ಚಿಂಚನಸೂರ್ ಅರ್ಹರಲ್ಲ. ಆದ್ದರಿಂದ ಅವರು ಕೂಡಲೇ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು. 
 
ಇನ್ನು ನಿನ್ನೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದ ಬೆಂಗಳೂರಿನ ಮಹಿಳಾ ಉದ್ಯಮಿ ಅಂಜನಾ ಎ.ಶಾಂತವೀರ್ ಎಂಬುವವರು, ಸಚಿವ ಬಾಬುರಾವ್ ಚಿಂಚನಸೂರ ಅವರು ತಮ್ಮ ಮೂರು ಫ್ಯಾಕ್ಟರಿಗಳು ನಷ್ಟದಲ್ಲಿದ್ದು, ಅವುಗಳನ್ನು ನವೀಕರಿಸಲು ಹಣದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹಣ ನೀಡುವಂತೆ ಕೇಳಿದ್ದರು. ಒಪ್ಪಿಗೆ ಸೂಚಿಸಿದ್ದ ನಾನು, ಒಟ್ಟು 12 ಬಾರಿ 11.88 ಲಕ್ಷ ರೂ. ಹಣವನ್ನು 2011ರಲ್ಲಿ ಕೊಟ್ಟಿದ್ದೆ. ಆದರೆ ಪ್ರಸ್ತುತ ಸಚಿವರು ಹಣ ಹಿಂದಿರುಗಿಸುತ್ತಿಲ್ಲ. ಕೇಳಿದಲ್ಲಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು. 
 
ಈ ಹಿನ್ನೆಲೆಯಲ್ಲಿ ಶೆಟ್ಟರ್ ಪ್ರಕರಣದ ವಿಶೇಷ ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿದರು. ಆದರೆ ಸಭಾಧ್ಯಕ್ಷರು ಅವಕಾಶಕ್ಕೆ ನಿರಾಕರಿಸಿದ ಕಾರಣ ಸಚಿವರು ತಮ್ಮ ಪದವಿಗೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.   

ವೆಬ್ದುನಿಯಾವನ್ನು ಓದಿ