ಹಾಡು ನಿಲ್ಲಿಸಿದ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಛನ್ನುಲಾಲ್ ಮಿಶ್ರಾ: ಮೋದಿ ಕಂಬನಿ

Sampriya

ಗುರುವಾರ, 2 ಅಕ್ಟೋಬರ್ 2025 (11:30 IST)
Photo Credit X
ನವದೆಹಲಿ: ಭಾರತೀಯ ಶಾಸ್ತ್ರೀಯ ಸಂಗೀತದ ದಿಗ್ಗಜ ಗಾಯಕ ಪಂಡಿತ್ ಛನ್ನುಲಾಲ್ ಮಿಶ್ರಾ ಅವರು ಇಂದು ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. 

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರೂ ಆಗಿರುವ ಪಂಡಿತ್ ಮಿಶ್ರಾ ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಅರೆ-ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಕಲಾವಿದರಾಗಿದ್ದರು. 

ಸುಮಧುರ ಕಂಠ ಮತ್ತು ಠುಮ್ರಿ ಗಾಯನಕ್ಕೆ ಹೆಸರುವಾಸಿಯಾಗಿದ್ದ ಪಂಡಿತ್ ಮಿಶ್ರಾ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇಂದು ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗಿದೆ. ನಿಧನದ ಕುರಿತು ಅವರ ಪುತ್ರಿ ನಮ್ರತಾ ಮಿಶ್ರಾ ಮಾಹಿತಿ ಹಂಚಿಕೊಂಡಿದ್ದಾರೆ. 

ಆಗಸ್ಟ್ 3, 1936 ರಂದು ಉತ್ತರ ಪ್ರದೇಶದ ಅಜಮ್‌ಗಢ ಜಿಲ್ಲೆಯ ಹರಿಹರಪುರ ಗ್ರಾಮದಲ್ಲಿ ಜನಿಸಿದ ಅವರು, ಕಿರಾನಾ ಘರಾನಾದ ಉಸ್ತಾದ್ ಅಬ್ದುಲ್ ಘನಿ ಖಾನ್ ಅವರಿಂದ ಕಲಿಯುವ ಮೊದಲು ತಮ್ಮ ತಂದೆ ಪಂಡಿತ್ ಬದ್ರಿ ಪ್ರಸಾದ್ ಮಿಶ್ರಾ ಅವರ ಅಡಿಯಲ್ಲಿ ಮೊದಲು ತರಬೇತಿ ಪಡೆದರು. ನಂತರ ಅವರು ಸಂಗೀತಶಾಸ್ತ್ರಜ್ಞ ಠಾಕೂರ್ ಜೈದೇವ್ ಸಿಂಗ್ ಅವರಿಂದ ಉನ್ನತ ತರಬೇತಿ ಪಡೆದರು.

ಅವರ ರಾಗ ವಿರಾಟ್ ಮತ್ತು ತುಮ್ರಿ ಮೆಹ್ಫಿಲ್ ಆಲ್ಬಮ್‌ಗಳು ಶಾಸ್ತ್ರೀಯ ಸಂಗೀತ ಪ್ರಿಯರಲ್ಲಿ ಇನ್ನೂ ಅಚ್ಚುಮೆಚ್ಚಿನವುಗಳಾಗಿವೆ. ಅಜಮ್‌ಗಢದಲ್ಲಿ ವಾಸಿಸುತ್ತಿದ್ದ ಅವರು ಪವಿತ್ರ ನಗರವಾದ ಕಾಶಿಯನ್ನು ತಮ್ಮ ವೃತ್ತಿಯ ಸ್ಥಳವನ್ನಾಗಿ ಆಯ್ಕೆ ಮಾಡಿಕೊಂಡರು, ಅಲ್ಲಿ ಅವರು ಶಾಸ್ತ್ರೀಯ ಸಂಗೀತದಲ್ಲಿ ಪಾಂಡಿತ್ಯ ಸಾಧಿಸಿದರು. ಅವರು ತಮ್ಮ ಜೀವಿತಾವಧಿಯಲ್ಲಿ ಹಲವಾರು ಉನ್ನತ ಗೌರವಗಳನ್ನು ಪಡೆದರು, ಅವುಗಳಲ್ಲಿ 2020 ರಲ್ಲಿ ಪದ್ಮವಿಭೂಷಣ, 2010 ರಲ್ಲಿ ಪದ್ಮಭೂಷಣ ಮತ್ತು 2000 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳೂ ಸೇರಿವೆ.

ಪಂಡಿತ್ ಚನ್ನುಲಾಲ್ ಮಿಶ್ರಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಖ್ಯಾತ ಶಾಸ್ತ್ರೀಯ ಗಾಯಕ ಪಂಡಿತ್ ಚನ್ನುಲಾಲ್ ಮಿಶ್ರಾ ಅವರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ. ಅವರು ತಮ್ಮ ಜೀವನದುದ್ದಕ್ಕೂ ಭಾರತೀಯ ಕಲೆ ಮತ್ತು ಸಂಸ್ಕೃತಿಯ ಸಮೃದ್ಧಿಗೆ ಸಮರ್ಪಿತರಾಗಿದ್ದರು. ಶಾಸ್ತ್ರೀಯ ಸಂಗೀತವನ್ನು ಜನಸಾಮಾನ್ಯರಿಗೆ ತಲುಪಿಸುವುದರ ಜೊತೆಗೆ, ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಂಪ್ರದಾಯವನ್ನು ಸ್ಥಾಪಿಸಲು ಅವರು ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ