ನಮ್ಮ ಭಾರತೀಯ ಕಾನೂನಿನಲ್ಲಿ ಕೊಲೆ, ಅತ್ಯಾಚಾರ ಎಂಬುದೆಲ್ಲಾ ಅತ್ಯಂತ ಗಂಭೀರ ಪ್ರಕರಣಗಳಾಗಿವೆ. ಈ ಪ್ರಕರಣದಲ್ಲಿ ಅಪರಾಧ ಸಾಬೀತಾದರೆ 7 ವರ್ಷ ಕಠಿಣ ಸಜೆ ಅಥವಾ ಜೀವಾವಧಿ ಇಲ್ಲವೇ ಗಲ್ಲು ಶಿಕ್ಷೆಯವರೆಗೂ ದಂಡನೆ ನೀಡಲಾಗುತ್ತದೆ. ಅದು ಒಬ್ಬೊಬ್ಬ ಅಪರಾಧಿಯ ಅಪರಾಧದ ಪ್ರಮಾಣ ನೋಡಿಕೊಂಡು ಶಿಕ್ಷೆ ನೀಡಲಾಗುತ್ತದೆ.
ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದರೆ, ದರ್ಶನ್ ಎ2 ಆರೋಪಿಯಾಗಿದ್ದಾರೆ. ಇಬ್ಬರೂ ಈಗ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಹತ್ಯೆ ಪ್ರಕರಣದಲ್ಲಿ ಎಲ್ಲಾ ಸಾಕ್ಷ್ಯಗಳು ಈ ಆರೋಪಿಗಳ ವಿರುದ್ಧವೇ ಇದೆ. ಪೊಲೀಸರು ಹಲವು ಡಿಜಿಟಲ್ ಮತ್ತು ಪ್ರತ್ಯಕ್ಷ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.
ಇದೆಲ್ಲವನ್ನೂ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಮತ್ತು ನ್ಯಾಯಾಲಯಕ್ಕೂ ಡಿಜಿಟಲ್ ಸಾಕ್ಷ್ಯಗಳನ್ನು ನೀಡಲಾಗಿದೆ. ನ್ಯಾಯಾಧೀಶರು ಜಾಮೀನು ನೀಡುವ ಮೊದಲು ಈ ಎಲ್ಲಾ ಅಂಶಗಳನ್ನು ಗಮನಿಸುತ್ತಾರೆ. ಆರೋಪಿಯ ಹಿನ್ನಲೆ, ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಆತ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆಯೇ ಎಂಬಿತ್ಯಾದಿ ಅಂಶಗಳು ಪ್ರಮುಖವಾಗುತ್ತದೆ.
ದರ್ಶನ್ ಸಮಾಜದಲ್ಲಿ ಪ್ರಭಾವೀ ವ್ಯಕ್ತಿ. ಅವರಿಗೆ ರಾಜಕೀಯದಲ್ಲೂ ಅನೇಕ ಪ್ರಭಾವಿಗಳ ಪರಿಚಯವಿದೆ. ಹೀಗಾಗಿ ಅವರನ್ನು ಅಷ್ಟು ಬೇಗ ಹೊರಗೆ ಬಿಟ್ಟರೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಅದಲ್ಲದೆ, ಅವರು ರೇಣುಕಾಸ್ವಾಮಿಯ ಕಿಡ್ನ್ಯಾಪ್ ಮಾಡಲು ಸಂಚು ರೂಪಿಸಿದವರು. ಒಟ್ಟು 17 ಆರೋಪಿಗಳ ಪೈಕಿ ಅವರ ಪಾತ್ರ ದೊಡ್ಡದಿದೆ. ಹೀಗಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ ತಕ್ಷಣ ಅಷ್ಟು ಬೇಗ ಅವರಿಗೆ ಜಾಮೀನು ಸಿಗುವುದು ಅನುಮಾನವಾಗಿದೆ.