ಬೆಂಗಳೂರು: ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಆದರೆ ಇದು ಅವರಿಗೆ ವರದಾನವಾದರೂ ಅಚ್ಚರಿಯಿಲ್ಲ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ದರ್ಶನ್ ಗೆ ಬೆನ್ನು ನೋವಿನ ಕಾರಣಕ್ಕೆ ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ. ಅದರಂತೆ ಅವರು ಈಗ ಬಿಜಿಎಸ್ ಆಸ್ಪತ್ರೆಗೆ ಸೇರಿ ನಾಲ್ಕು ದಿನಗಳಾಗಿವೆ. ವೈದ್ಯರು ತಪಾಸಣೆಗಳನ್ನು ನಡೆಸಿ ಈಗ ಶಸ್ತ್ರಚಿಕಿತ್ಸೆ ನಡೆಸಲೇಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದ್ದಾರೆ.
ದರ್ಶನ್ ಗೆ ನಡೆದಾಡಲು ಕಷ್ಟವಾಗುತ್ತಿದೆ. ಕಾಲು ಕೂಡಾ ವೀಕ್ ಆಗಿದೆ. ಈ ಕಾರಣಕ್ಕೆ ಅವರು ಶಸ್ತ್ರಚಿಕಿತ್ಸೆಗೊಳಗಾಗಬೇಕಾಗುತ್ತದೆ. ಬೆನ್ನಿನ ಶಸ್ತ್ರಚಿಕಿತ್ಸೆಗೊಳಗಾದರೆ ಅವರು ಕೆಲವು ದಿನ ವಿಶ್ರಾಂತಿ ಪಡೆಯಬೇಕಾಗುತ್ತದೆ. ಆದರೆ ಕೋರ್ಟ್ ನೀಡಿರುವ ಆರು ವಾರಗಳ ಕಾಲಾವಕಾಶದಲ್ಲಿ ಈಗ ಐದು ವಾರ ಕಳೆದುಹೋಗಿದೆ.
ಒಂದು ವೇಳೆ ಈಗ ಶಸ್ತ್ರಚಿಕಿತ್ಸೆಗೊಳಗಾದರೂ ಜಾಮೀನು ಅವಧಿ ಮುಕ್ತಾಯವಾಗುವ ಹಂತಕ್ಕೆ ಚೇತರಿಸಿಕೊಳ್ಳುವುದು ಅನುಮಾನ. ಹಾಗಿದ್ದಾಗ ಅವರ ಪರ ವಕೀಲರು ಕೋರ್ಟ್ ಮುಂದೆ ಜಾಮೀನು ವಿಸ್ತರಿಸಲು ಮನವಿ ಮಾಡಲು ಉತ್ತಮ ಕಾರಣ ಸಿಕ್ಕಂತಾಗುತ್ತದೆ. ಹೀಗಾಗಿ ಇದು ಅವರ ಪಾಲಿಗೆ ವರದಾನವಾದರೂ ಅಚ್ಚರಿಯಿಲ್ಲ.