ಹಿಂದಿ ಮಾತನಾಡುವ ಹುಡುಗಿ ಜತೆ ಆದ ಅನುಭವ ಬಿಚ್ಚಿಟ್ಟ ನಿರ್ದೇಶಕ ಕೆಎಂ ಚೈತನ್ಯ
ಶುಕ್ರವಾರ, 14 ಆಗಸ್ಟ್ 2020 (11:57 IST)
ಬೆಂಗಳೂರು: ಹಿಂದಿ ಹೇರಿಕೆ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ಸ್ಯಾಂಡಲ್ ವುಡ್ ನಿರ್ದೇಶಕ ಕೆಎಂ ಚೈತನ್ಯ ತಮಗಾದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.
ಬೆಳ್ಳಂ ಬೆಳಿಗ್ಗೆ ಟಾಟಾ ಸ್ಕೈ ಸಿಬ್ಬಂದಿ ಹುಡುಗಿಯೊಬ್ಬಳು ಕರೆ ಮಾಡಿ ಏಕಾ ಏಕಿ ಹಿಂದಿಯಲ್ಲಿ ಮಾತನಾಡಿದಳು. ನನಗೆ ಹಿಂದಿ ಸಿನಿಮಾ, ಹಾಡುಗಳೆಂದರೆ ಇಷ್ಟ. ಆದರೆ ನನಗೆ ಆ ಭಾಷೆ ಬರುತ್ತದೋ ಇಲ್ಲವೋ ಎಂದು ಗೊತ್ತಿಲ್ಲದೇ ಆಕೆ ಇಷ್ಟುದ್ದ ಮಾತನಾಡಿದಾಗ ನಾನು ಅರ್ಧದಲ್ಲಿ ಆಕೆಯನ್ನು ತಡೆದು ನಿಮಗೆ ಕನ್ನಡ ಅಥವಾ ಇಂಗ್ಲಿಷ್ ಬರುತ್ತದೆಯೇ? ಆ ಭಾಷೆಯಲ್ಲಿ ಮಾತನಾಡಿ ಎಂದೆ.
ಆಗ ಅವಳು ಇಲ್ಲ ಅಂದಳು. ಅವಳ ಪ್ರಕಾರ ಹಿಂದಿ ನಮ್ಮ ದೇಶದ ಅಧಿಕೃತ ಭಾಷೆ. ಹಾಗಾಗಿ ಎಲ್ಲರಿಗೂ ಹಿಂದಿ ಗೊತ್ತಿರಲೇಬೇಕು. ನಮ್ಮಲ್ಲಿ ಹೆಚ್ಚಿನವರು ಇದನ್ನೇ ಅಂದುಕೊಂಡಿದ್ದಾರೆ. ಹಾಗಿದ್ದರೆ ಪರದೇಶದ ಇಂಗ್ಲಿಷ್ ಭಾಷೆ ಮಾತನಾಡಬೇಕೇ ಎಂದು ಕೇಳುತ್ತಾರೆ.
ನಾವು ದಕ್ಷಿಣ ಭಾರತದವರಿಗೆ ಹಿಂದಿ ಭಾಷೆಯೂ ವಿದೇಶದಿಂದ ಬಂದ ಇಂಗ್ಲಿಷ್ ಭಾಷೆಗೆ ಸರಿಸಮಾನ. ಹೀಗಾಗಿ ಇನ್ನು ಮುಂದೆ ಯಾರೇ ತಮ್ಮ ಇಷ್ಟ ಬಂದ ಭಾಷೆಯಲ್ಲಿ ಮಾತನಾಡಿದರೂ ನಿಮಗೆ ಆ ಭಾಷೆ ಗೊತ್ತಿದ್ದರೂ ಇದ್ದಕ್ಕಿದ್ದಂತೆ ಕನ್ನಡ ಬಿಟ್ಟು ಅವರ ಭಾಷೆಯಲ್ಲಿ ಮಾತನಾಡುವುದನ್ನು ಬಿಡಿ ಎಂದು ಚೈತನ್ಯ ಹೇಳಿಕೊಂಡಿದ್ದಾರೆ. ಅವರ ಈ ಮಾತಿಗೆ ಸಂಸದೆ ಸುಮಲತಾ ಅಂಬರೀಶ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದು, ಹಿಂದಿ ವಿರೋಧಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.