ಬೆಂಗಳೂರು: ಈ ವಾರದ ಕಿಚ್ಚನ ಪಂಚಾಯಿತಿಗೆ ಬಿಗ್‌ಬಾಸ್ ಪ್ರಿಯರು ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ. ಅಶ್ವಿನಿ ಗೌಡ ಹಾಗೂ ಜಾಹ್ನವಿ , ರಕ್ಷಿತಾ ಶೆಟ್ಟಿಗೆ ವೈಯಕ್ತಿಕವಾಗಿ ಮಾತನಾಡಿರುವುದು ನೋಡುಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಹ್ನವಿ ಹಾಗೂ ಅಶ್ವಿನಿ ನಡೆ ಭಾರೀ ಟೀಕೆಗೆ ಗುರಿಯಾಗಿ, ಟ್ರೋಲ್ ಮಾಡಲಾಯಿತು.
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಆರಂಭವಾಗಿ ಮೂರು ವಾರ ಕಳೆದಿದೆ. 3ನೇ ವಾರದ ಪಂಚಾಯಿತಿ ನಡೆಸಲು ಕಿಚ್ಚ ಸುದೀಪ್ ವೇದಿಕೆಗೆ ಆಗಮಿಸಿದ್ದಾರೆ. ವೇದಿಕೆಗೆ ಆಗಮಿಸುತ್ತಿದ್ದಂತೆ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಹಾಗೂ ಜಾಹ್ನವಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕಿಚ್ಚ ಸುದೀಪ್ ಅವರು, ನಿಮ್ಮ ಹೇಳಿಕೆಗಳನ್ನು ಹೇಳುತ್ತಾ ಹೋಗುತ್ತೀನಿ. ನಿನ್ನ ನೋಡಿದರೇ ಎಲ್ಲಿಂದ ಬಂದಿರುವೆ ಎಂದು ಗೊತ್ತಾಗುತ್ತೆ, ಕಾರ್ಟೂನ್ ಅಂತೀರಾ. ಸುಧಿ ನಿಮ್ಮನ್ನ ಯಮ್ಮಾ ಅಂತ ಕರೆದರೇ, ಹಾಗೇ ಕರಿಬೇಡ ನನಗೊಂದು ಹೆಸರಿದೆ ಅಂತೀರಿ. ಆದರೆ ನೀವು ಅವಿವೇಕಿ (ಈಡಿಯಟ್) ಎನ್ನುತ್ತೀರಿ. ತಮಾಷೆ ಮಾಡಿಕೊಂಡು ನಿಮ್ಮ ವ್ಯಕ್ತಿತ್ವವನ್ನು ಕೊಲೆ ಮಾಡುತ್ತಾ ಹೋದರೆ ನಿಮಗೆ ಒಪ್ಪಿಗೆ ಇದ್ಯಾ? ಒಬ್ಬನ ಮರ್ಯಾದೆ, ಒಬ್ಬರ ಅಸ್ತಿತ್ವ, ಒಬ್ಬರ ಗೌರವ ಇನ್ನೊಬ್ಬನ ಆಸ್ತಿ ಆಟ ಸಾಮಾನ್ ಆಗಬಾರದು. ಯಾರ ಅಪ್ಪನ ಆಸ್ತಿನೂ ಅಲ್ಲ ಎಂದು ವೇದಿಕೆ ಮೇಲೆ ಕಿಚ್ಚ ಸುದೀಪ್ ಗುಡುಗಿದ್ದಾರೆ.
ಅಶ್ವಿನಿ ಗೌಡ ಹಾಗೂ ಜಾಹ್ನವಿ ತಮಾಷೆಗಾಗಿ ರಕ್ಷಿತಾ ರಾರಾ ಎಂದು ನಾಗವಲ್ಲಿ ರೀತಿ ಡ್ಯಾನ್ಸ್ ಮಾಡಿದ್ದಳು ಎಂದು ಮನೆಮಂದಿ ಮುಂದೆ ಹೇಳಿದ್ದರು. ಇದಾದ ಬಳಿಕ ನಿನ್ನೆಯ (ಶುಕ್ರವಾರ) ಸಂಚಿಕೆಯಲ್ಲಿ ರಕ್ಷಿತಾ ಜೊತೆಗೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಗಲಾಟೆ ಮಾಡಿಕೊಂಡಿದ್ದಾರೆ. ಮಾತಿನ ಬರದಲ್ಲಿ ಅಶ್ವಿನಿ, ನಿನ್ನ ಬಟ್ಟೆ ನೋಡಿದರೆ ಗೊತ್ತಾಗುತ್ತೆ ಎಲ್ಲಿಂದ ಬಂದಿದ್ದೀಯಾ ಅಂತ, ಅವಿವೇಕಿ, ಮುಚ್ಚಿಕೊಂಡು ಮಲಗಿಕೋ ಎಂದು ಹೇಳಿದ್ದರು.