ಡಾ.ರಾಜ್‍ಕುಮಾರ್ ಸಿವಿಲ್ ಸರ್ವಿಸಸ್ ತರಬೇತಿ ಕೇಂದ್ರ

ಶನಿವಾರ, 18 ಫೆಬ್ರವರಿ 2017 (18:10 IST)
ನಟ ಸಾರ್ವಭೌಮ ಡಾ.ರಾಜ್‍ಕುಮಾರ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಿವಿಲ್ ಸರ್ವಿಸಸ್ ಅಕಾಡೆಮಿ ಸ್ಥಾಪಿಸುತ್ತಿರುವುದಾಗಿ ನಟ ರಾಗವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ. ಮಾರ್ಚ್‌ನಿಂದ ಆರಂಭವಾಗಲಿರುವ ಅಕಾಡೆಮಿ ಏ.26ರ ರಾಜ್ ಕುಮಾರ್ ಹುಟ್ಟುಹಬ್ಬದ ದಿನ ತರಗತಿಗಳು ಆರಂಭವಾಗಲಿವೆ ಎಂದಿದ್ದಾರೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯದಿಂದ ಐಎಎಸ್‌ನಂತಹ ನಾಗರಿಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ದೆಹಲಿಗೆ ಹೆಚ್ಚಿನ ಮಂದಿ ಹೋಗುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕಷ್ಟವಾಗುತ್ತಿದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ತರಬೇತಿ ಕೇಂದ್ರ ಆರಂಭಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
 
ರಾಜ್ಯದ ಅಭ್ಯರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಅಕಾಡೆಮಿ ಆರಂಭಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಎಲ್ಲೂ ಗುಣಮಟ್ಟದ ತರಬೇತಿ ಸಿಗುತ್ತಿಲ್ಲ. ಹಾಗಾಗಿ ನಮ್ಮ ರಾಜ್ಯದಲ್ಲಿ ಯಶಸ್ಸು ಸಾಧಿಸುತ್ತಿರುವ ಅಭ್ಯರ್ಥಿಗಳ ಸಂಖ್ಯೆ ತುಂಬಾ ಕಡಿಮೆ ಇದೆ. 
 
ಮೊದಲು ಐಎಎಸ್ ತರಬೇತಿ ಆ ಬಳಿಕ ಕೆಎಎಸ್ ತರಬೇತಿ ನೀಡಲಾಗುತ್ತದೆ. 100 ರಿಂದ 150 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ರಾಜ್ಯದ ನಾನಾ ಕಡೆಗಳಿಂದ ನುರಿತ ಬೋಧಕರು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇತರೆ ತರಬೇತಿ ಕೇಂದ್ರಗಳಿಗೆ ಹೋಲಿಸಿದರೆ ನಮಲ್ಲಿ ಅರ್ಧದಷ್ಟು ಶುಲ್ಕ ಮಾತ್ರ ವಿಧಿಸಲಾಗುತ್ತದೆ.  ಕೆಎಎಸ್ ಅಭ್ಯರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ