ಬೆಂಗಳೂರು: ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿ ಗಿಲಿ ಶೋ ಮೂಲಕ ಜನರನ್ನು ನಕ್ಕು ನಗಿಸಿದ್ದ ಚಂದ್ರಪ್ರಭಾ ಈಗ ಗಾರೆ ಕೆಲಸ ಮಾಡುತ್ತಿದ್ದಾರೆ. ಅಷ್ಟಕ್ಕೂ ಅವರು ಗಾರೆ ಕೆಲಸ ಮಾಡ್ತಿರೋದು ಯಾಕೆ?
ಚಂದ್ರಪ್ರಭಾ ಕರಾವಳಿ ಮೂಲದವರು. ಗಿಚ್ಚಿ ಗಿಲಿ ಗಿಲಿ ಶೋ ಮೂಲಕ ಕಾಮಿಡಿಯನ್ ಆಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಮಜಾ ಟಾಕೀಸ್ ಶೋನಲ್ಲೂ ಕೆಲವು ಎಪಿಸೋಡ್ ಗಳಲ್ಲಿ ಕಾಣಿಸಿಕೊಂಡಿದ್ದರು. ಕೆಲವು ಸಿನಿಮಾಗಳಲ್ಲೂ ಸಣ್ಣ ಪುಟ್ಟ ಪಾತ್ರ ಮಾಡಿದ್ದಾರೆ.
ಆದರೆ ಅವರು ಅಂದುಕೊಂಡಷ್ಟು ಅವರಿಗೆ ಅವಕಾಶಗಳು ಸಿಗುತ್ತಿಲ್ಲವಂತೆ. ಇತ್ತೀಚೆಗೆ ಶೋಗಳು ಕಡಿಮೆಯಾಗಿದೆ. ಸಿನಿಮಾ, ಕಿರುತೆರೆಯಲ್ಲೂ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಜೀವನಕ್ಕೆ ದಾರಿ ಬೇಕಲ್ವಾ ಎಂದು ಅವರು ಗಾರೆ ಕೆಲಸಕ್ಕೆ ಸೇರಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ, ಇನ್ ಸ್ಟಾಗ್ರಾಂನಲ್ಲೂ ಗಾರೆ ಕೆಲಸ ಮಾಡುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಮದುವೆಯಾಗಿದೆ, ಸಂಸಾರವಿದೆ. ಹಾಗಂತ ಯಾರೂ ಮುಜುಗರಪಡುವಂತಹ ಕೆಲಸ ಮಾಡ್ತಿಲ್ಲ. ಮೊದಲೂ ನಾನು ಗಾರೆ ಕೆಲಸ ಮಾಡುತ್ತಿದ್ದೆ. ಈಗ ಮತ್ತೆ ಮಾಡುತ್ತಿದ್ದೇನೆ. ಸಂಪಾದನೆಗೆ ಸರಿಯಾದ ದಾರಿಯಲ್ಲಿ ನಡೆಯಬೇಕು ಅಷ್ಟೇ ಎನ್ನುವುದು ಅವರ ಪಾಲಿಸಿ.