ಬಿಬಿಎಂಪಿ ವಿರುದ್ಧ ಸಿಡಿದೆದ್ದ ಡಾ.ರಾಜ್-ಡಾ.ವಿಷ್ಣುವರ್ಧನ್ ಅಭಿಮಾನಿಗಳು
ಸೋಮವಾರ, 6 ಸೆಪ್ಟಂಬರ್ 2021 (08:54 IST)
ಬೆಂಗಳೂರು: ನಗರದಲ್ಲಿ ಅನುಮತಿ ಪಡೆಯದೇ ನಿರ್ಮಿಸಲಾದ ಸಿನಿಮಾ ದಿಗ್ಗಜರ ಪುತ್ಥಳಿಗಳನ್ನು ಕೋರ್ಟ್ ಆದೇಶದ ಹಿನ್ನಲೆಯಲ್ಲಿ ತೆರವುಗೊಳಿಸಲು ಮುಂದಾಗಿರುವ ಬಿಬಿಎಂಪಿಗೆ ಈಗ ಅಭಿಮಾನಿಗಳ ವಿರೋಧ ಎದುರಾಗಿದೆ.
ಡಾ. ರಾಜ್ ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅಭಿಮಾನಿಗಳು ಒಗ್ಗಟ್ಟಾಗಿ ಬಿಬಿಎಂಪಿ ನಡೆ ವಿರುದ್ಧ ಹೋರಾಟ ನಡೆಸಲು ಮುಂದಾಗಿದ್ದಾರೆ. ಈ ನಟರ ಪ್ರತಿಮೆಗೆ ಕೈ ಹಾಕಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಡಾ.ರಾಜ್ ಮತ್ತು ವಿಷ್ಣು ಅಭಿಮಾನಿಗಳ ಸಂಘ ಎಚ್ಚರಿಕೆ ನೀಡಿದೆ.
ಒಂದು ವೇಳೆ ತೆಗೆಯುವುದಾದರೆ ಇಂದಿರಾ ಗಾಂಧಿ, ಮಹಾತ್ಮಾ ಗಾಂಧಿ ಸೇರಿದಂತೆ ಎಲ್ಲರ ಪ್ರತಿಮೆ ತೆಗೆಯಲಿ. ಆದರೆ ನಮ್ಮ ನೆಚ್ಚಿನ ನಟರ ಪ್ರತಿಮೆ ತೆಗೆದು ಹಾಕಿದ್ರೆ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.