ಕುತೂಹಲ ಕೆರಳಿಸಿರುವ ನವಿರು ಭಾವನೆಗಳ ’ಏನೆಂದು ಹೆಸರಿಡಲಿ’

ಬುಧವಾರ, 8 ಫೆಬ್ರವರಿ 2017 (11:19 IST)
ರವಿ ಬಸಪ್ಪನದೊಡ್ಡಿ ನಿರ್ದೇಶನದ `ಏನೆಂದು ಹೆಸರಿಡಲಿ’ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ. ಈಗಾಗಲೇ ಕಿರುತೆರೆಯಲ್ಲಿ ಹಿಟ್ ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ಈ ನಿರ್ದೇಶಕರ ಚೊಚ್ಚಲ ಚಿತ್ರವಿದು. ಏನೆಂದು ಹೆಸರಿಡಲಿ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಕೊಳ್ಳಲು ನಿರ್ದೇಶಕ ರವಿ ಬಸಪ್ಪನದೊಡ್ಡಿಯವರೂ ಮೂಲ ಕಾರಣ. ಯಾಕೆಂದರೆ ಅವರೀಗಾಗಲೇ ಕಿರುತೆರೆ ಕ್ಷೇತ್ರದಲ್ಲಿ ಸ್ಟಾರ್ ಡೈರೆಕ್ಟರ್. ಗುಪ್ತಗಾಮಿನಿ, ಅಗ್ನಿಸಾಕ್ಷಿ ಮುಂತಾದ ಧಾರಾವಾಹಿಗಳನ್ನು ಕಿರುತೆರೆ ವೀಕ್ಷಕರು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. 
 
ಆ ಧಾರಾವಾಹಿಗಳೂ ಸೇರಿದಂತೆ ಇದೀಗ ಭಾರೀ ಫೇಮಸ್ ಆಗಿರುವ ಪುಟ್ಟಗೌರಿ ಮದುವೆ ಸೀರಿಯಲ್ಲಿನ ನಿರ್ದೇಶಕರು ಇದೇ ರವಿ ಬಸಪ್ಪನದೊಡ್ಡಿ. ಇದೆಲ್ಲದರಲ್ಲಿಗೂ ಸಂಬಂಧಗಳನ್ನು, ಅದರ ಸೂಕ್ಷ್ಮ ವಿಚಾರಗಳನ್ನು ಪ್ರಧಾನವಾಗಿಟ್ಟುಕೊಂಡು ಮನ ಗೆದ್ದಿರುವ ಇವರು ಚಿತ್ರವೊಂದನ್ನು ನಿರ್ದೇಶಿಸಿದ್ದಾರೆಂದ ಮೇಲೆ ಸಹಜವಾಗಿಯೇ ಕುತೂಹಲಗಳು ಮೂಡುತ್ತವೆ.
 
ಘಟಾನುಘಟಿಗಳೊಂದಿಗೆ ಪಳಗಿರುವ ರವಿ ಅದೆಲ್ಲವನ್ನು ಧಾರೆ ಎರೆದು ನಿರ್ದೇಶಿಸಿರುವ ಚಿತ್ರ ಏನೆಂದು ಹೆಸರಿಡಲಿ. ಇಲ್ಲಿಯೂ ಕೂಡಾ ಮನಕ್ಕೆ ನಾಟುವಂಥಾ ನವಿರು ಭಾವಗಳು, ಪ್ರೀತಿ, ಸೆಂಟಿಮೆಂಟು, ಕಾಮಿಡಿ ಹಾಗೂ ಏನಂಥ ಹೆಸರಿಡಬೇಕೆಂದೇ ತಿಳಿಯದಂಥಾ ಸಂಬಂಧಗಳ ಕಥೆ ಇರಬಹುದಾ ಎಂಬ ಅಚ್ಚರಿಯನ್ನು ಇಡೀ ಚಿತ್ರತಂಡ ಜೋಪಾನವಾಗಿ ಕಾಯ್ದಿಟ್ಟುಕೊಂಡಿದೆ.
 
ಈ ಚಿತ್ರಕ್ಕೆ ಶ್ರೀನಿವಾಸ ಕುಲಕರ್ಣಿ ಮತ್ತು ಶ್ರುತಿ ಕುಲಕರ್ಣಿ ನಿರ್ಮಾಪಕರು. ಒಂದು ಚೆಂದದ ಚಿತ್ರ ಮಾಡಬೇಕೆಂದು ಕನಸಿಟ್ಟುಕೊಂಡಿದ್ದ ನಿರ್ಮಾಪಕರು ಏನೆಂದು ಹೆಸರಿಡಲಿ ಚಿತ್ರಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆಂದು ಚಿತ್ರ ತಂಡ ಕೊಂಡಾಡುತ್ತಿದೆ. 
 
ನಿರ್ದೇಶಕರ ಎಲ್ಲಾ ಹೊಸ ತುಡಿತಗಳಿಗೂ ಸಾಥ್ ನೀಡುತ್ತಾ ಬಂದಿರೋ ನಿರ್ಮಾಪಕರು ಒಂದೊಳ್ಳೆ ಚಿತ್ರ ಮಾಡಿದ ಖುಷಿಯಲ್ಲಿದ್ದಾರೆ. ಶ್ರುತಿ ಕುಲಕರ್ಣಿ ಅವರು ನಾಯಕಿಯ ತಾಯಿಯಾಗಿಯೂ ಈ ಚಿತ್ರದಲ್ಲಿ ನಟಿಸಿದ್ದಾರಂತೆ. ಇನ್ನುಳಿದಂತೆ ಮಧು ಕುಲಕರ್ಣಿ, ಭಾರತಿ ಗುನಳ್ಳಿ, ಅನುಷಾ ಕುಲಕರ್ಣಿ ಈ ಚಿತ್ರಕ್ಕೆ ಸಹನಿರ್ಮಾಪಕರಾಗಿದ್ದಾರೆ.
 
ಶುಗರ್ ಕ್ಯೂಬ್ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಮೂಡಿ ಬಂದಿರೋ ಈ ಚಿತ್ರಕ್ಕೆ ಜನಪ್ರಿಯ ಸಾಹಿತಿ, ಸಿನಿಮಾ ಪತ್ರಕರ್ತ ಜೋಗಿ ಸಂಭಾಷಣೆ ಬರೆದಿದ್ದಾರೆ. ಅದು ಕೂಡಾ ಆಕರ್ಷಣೆಗಳಲ್ಲೊಂದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ