ಪುಷ್ಪ 2 ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತ: ಚಿತ್ರ ನೋಡಲು ಬಂದ ತಾಯಿ ಸಾವು, ಮಗ ಗಂಭೀರ

Sampriya

ಗುರುವಾರ, 5 ಡಿಸೆಂಬರ್ 2024 (14:38 IST)
ಹೈದರಾಬಾದ್:‌ ಸ್ಟೈಲಿಷ್‌ ಸ್ಟಾರ್‌ ಅಲ್ಲು ಅರ್ಜುನ್‌ ಮತ್ತು ಕನ್ನಡತಿ ರಶ್ಮಿಕಾ ಮಂದಾನ ಅಭಿನಯದ ಪುಷ್ಪ 2 ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಹೈದರಾಬಾದ್‌ನ ಆರ್‌ಟಿಸಿ ಕ್ರಾಸ್‌ರೋಡ್ಸ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಈ ದುರಂತ ಸಂಭವಿಸಿದೆ. ದಿಲ್‌ಸುಖ್‌ನಗರದ ರೇವತಿ ಮೃತ ಮಹಿಳೆ. ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು.

ರಾತ್ರಿ 10:30 ರ ಸುಮಾರಿಗೆ ಥಿಯೇಟರ್‌ನಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು.  ಸಿನಿಮಾ ಸ್ಕ್ರೀನಿಂಗ್‌ನಲ್ಲಿ ಸಂಗೀತ ನಿರ್ದೇಶಕ ದೇವಿ ಪ್ರಸಾದ್ ಅವರೊಂದಿಗೆ ಅಲ್ಲು ಅರ್ಜುನ್ ಹಾಜರಿದ್ದರು. ಈ ವೇಳೆ ನೂಕುನುಗ್ಗಲು ಜಾಸ್ತಿಯಾಗಿ ಕಾಲ್ತುಳಿತ ಸಂಭವಿಸಿತು.

ನೂಕು ನುಗ್ಗಲಿನಿಂದ ಥಿಯೇಟರ್ ನ ಮುಖ್ಯ ಗೇಟ್ ಕುಸಿದಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಲಾಠಿ ಪ್ರಹಾರ ನಡೆಸಿದ್ದು, ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ವೇಳೆ ಮಹಿಳೆ ಮೃತಪಟ್ಟಿದ್ದು, ಅವರ 9 ವರ್ಷದ ಮಗ ಗಂಭೀರ ಗಾಯಗೊಂಡಿದ್ದಾರೆ.

ಪೊಲೀಸರ ಪ್ರಕಾರ, ಚಿತ್ರ ವೀಕ್ಷಿಸಲು ಮಾತ್ರವಲ್ಲದೆ ಚಿತ್ರದ ನಿರ್ಮಾಣ ತಂಡದ ಸದಸ್ಯರನ್ನು ನೋಡಲು ಸಹ ಸಾವಿರಾರು ಜನರು ಥಿಯೇಟರ್ ನಲ್ಲಿ ಜಮಾಯಿಸಿದ್ದರು. ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೆಚ್ಚಿನ ಪೊಲೀಸರನ್ನು ಕರೆಸಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ