’ಕಿರಿಕ್ ಪಾರ್ಟಿ’ ಹಾಡಿನ ವಿವಾದಕ್ಕೆ ಬ್ರೇಕ್ ಹಾಕಿದ ಹೈಕೋರ್ಟ್

ಶುಕ್ರವಾರ, 30 ಡಿಸೆಂಬರ್ 2016 (12:47 IST)
ರಕ್ಷಿತ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಕಿರಿಕ್ ಪಾರ್ಟಿ ಚಿತ್ರ ಇದೇ ಶುಕ್ರವಾರ ತೆರೆ ಅಲಂಕರಿಸುತ್ತಿದೆ. ಆದರೆ ಚಿತ್ರದ ಹಾಡೊಂದು ವಿವಾದಕ್ಕೊಳಗಾಗಿದ್ದು ಚಿತ್ರ ಬಿಡುಗಡೆಗ ಲಹರಿ ಆಡಿಯೋ ಸಂಸ್ಥೆಯ ವೇಲು ತಡೆಯಾಜ್ಞೆ ತಂದಿದ್ದರು. ಹಾಗಾಗಿ ಅನ್ಯ ದಾರಿಯಿಲ್ಲದೆ ಆ ಹಾಡನ್ನು ಕತ್ತರಿಸಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು.
 
ಈಗ ಸ್ವತಃ ರಕ್ಷಿತ್ ಶೆಟ್ಟಿ ಅವರೇ ತಿಳಿಸಿರುವ ವಿಚಾರ ಏನೆಂದರೆ, ಸಿವಿಲ್ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೊರೆ ಹೋಗಿದ್ದೆವು. ಸಿವಿಲ್ ನ್ಯಾಯಾಲಯದ ಆಜ್ಞೆಯನ್ನು ಹೈಕೋರ್ಟ್ ತಡೆಹಿಡಿದಿದೆ. ಹಾಗಾಗಿ ಈಗಾಗಲೆ ತೆಗೆದಿರುವ ಹಾಡಿನೊಂದಿಗೆ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ ಎಂದಿದ್ದಾರೆ ರಕ್ಷಿತ್.
 
ಚಿತ್ರದಲ್ಲಿನ 'ಹೇ ವೂ ಆರ್ ಯು' ಹಾಡಿನ ಟ್ಯೂನ್‌ಗೆ ಲಹರಿ ಆಡಿಯೋ ಸಂಸ್ಥೆ ಆಕ್ಷೇಪಿಸಿತ್ತು. ಇದು ಅವರ  ಒಡೆತನದ 'ಶಾಂತಿ ಕ್ರಾಂತಿ' ಸಿನೆಮಾದ 'ಮಧ್ಯ ರಾತ್ರೀಲಿ' ಹಾಡಿನ ಟ್ಯೂನ್ ನ ನಕಲು ಎಂದು ಕಾನೂನು ನೋಟಿಸ್ ನೀಡಿತ್ತು. ಈ ಹಾಡನ್ನು ಸಿನಿಮಾದಿಂದ ತೆಗೆದು ಹಾಕಿದರೆ ಸಿನೆಮಾ ಬಿಡುಗಡೆಗೆ ಯಾವುದೇ ಆಕ್ಷೇಪ ಇಲ್ಲ ಎಂದು ಕೂಡ ಲಹರಿ ಸಂಸ್ಥೆ ನೀಡಿರುವ ನೋಟಿಸ್ ನಲ್ಲಿ ತಿಳಿಸಿತ್ತು. 
 
ಅದರ ಪ್ರಕಾರ ಚಿತ್ರತಂಡ ಹಾಡನ್ನು ತೆಗೆದಿತ್ತು. ಈಗ ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಮತ್ತೆ ಹಾಡನ್ನು ಸೇರಿಸುತ್ತಿರುವುದಾಗಿ ತಿಳಿಸಿದೆ ಚಿತ್ರತಂಡ. ಇದಕ್ಕಾಗಿ ಸ್ವಲ್ಪ ಸಮಯ ಬೇಕಾಗಬಹುದು.  ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದ ಎಂದಿದ್ದಾರೆ ರಕ್ಷಿತ್ ಶೆಟ್ಟಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ