ಸೈಮಾದಲ್ಲಿ ಈ ಬಾರಿ ಕನ್ನಡ ಸಿನಿಮಾಗಳ ನಡುವೆ ಇನ್ನಿಲ್ಲದ ಪೈಪೋಟಿ
ಸೋಮವಾರ, 7 ಆಗಸ್ಟ್ 2023 (09:10 IST)
Photo Courtesy: Twitter
ಬೆಂಗಳೂರು: 2023 ನೇ ಸಾಲಿನ ಸೈಮಾ ಪ್ರಶಸ್ತಿಗೆ ಈಗಾಗಲೇ ದಕ್ಷಿಣ ಭಾರತದ ಸಿನಿಮಾಗಳು ವಿವಿಧ ವಿಭಾಗದಲ್ಲಿ ನಾಮಿನೇಟ್ ಆಗಿವೆ. ಅದರಲ್ಲಿ ಕನ್ನಡ ವಿಭಾಗದಲ್ಲಂತೂ ಹಿಂದೆಂದೂ ಇಲ್ಲದ ಪೈಪೋಟಿಯಿದೆ.
ದಕ್ಷಿಣ ಭಾರತ ಸಿನಿಮಾ ರಂಗದ ಪ್ರತಿಭೆಗಳನ್ನು ಗುರುತಿಸಿ ನೀಡುವ ಪ್ರಶಸ್ತಿಯೇ ಸೈಮಾ. ಇಲ್ಲಿ ಉತ್ತಮ ನಟ, ನಿರ್ದೇಶಕ, ಚಿತ್ರ ಹೀಗೆ ಹಲವು ವಿಭಾಗಗಳಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳು ನಾಮಿನೇಟ್ ಆಗಿವೆ. ಜನರೇ ವೋಟ್ ಹಾಕಿ ತಮ್ಮ ಮೆಚ್ಚಿನ ಸಿನಿಮಾ, ನಟ, ನಿರ್ದೇಶಕ ಎಂದು ವಿವಿಧ ವಿಭಾಗಗಳಲ್ಲಿ ವೋಟ್ ಮಾಡುವ ಅವಕಾಶ ನೀಡಲಾಗಿದೆ.
ಆದರೆ ಕನ್ನಡದಲ್ಲಿ ಈ ಬಾರಿ ಘಟಾನುಘಟಿ ಸಿನಿಮಾಗಳು, ಸ್ಟಾರ್ ಗಳು ಸ್ಪರ್ಧೆಯಲ್ಲಿರುವುದು ಜನರಿಗೆ ಯಾರಿಗೆ ವೋಟ್ ಹಾಕಬೇಕು ಎಂದು ಗೊಂದಲ ಉಂಟುಮಾಡುವಂತಹ ಪೈಪೋಟಿಯಿದೆ. ಕಾಂತಾರ, ಕೆಜಿಎಫ್ 2, ವಿಕ್ರಾಂತ್ ರೋಣ, 777 ಚಾರ್ಲಿ, ಲವ್ ಮಾಕ್ಟೇಲ್ 2 ಮುಂತಾದ ಸೂಪರ್ ಹಿಟ್ ಸಿನಿಮಾಗಳು ಸ್ಪರ್ಧೆಯಲ್ಲಿವೆ.
ಉತ್ತಮ ಚಿತ್ರ ವಿಭಾಗದಲ್ಲಿ ಕಾಂತಾರ, ಕೆಜಿಎಫ್ 2, ವಿಕ್ರಾಂತ್ ರೋಣ, ಲವ್ ಮಾಕ್ಟೇಲ್ 2, 777 ಚಾರ್ಲಿ ಸಿನಿಮಾಗಳಿವೆ. ಇವೆಲ್ಲವೂ ಜನರಿಗೆ ಇಷ್ಟವಾದ ಚಿತ್ರಗಳೇ ಇದರಲ್ಲಿ ಯಾವುದನ್ನು ಆಯ್ಕೆ ಮಾಡಬೇಕೆನ್ನುವ ಗೊಂದಲ ಮೂಡುವುದು ಸಹಜ. ಇನ್ನು ಉತ್ತಮ ನಟ ವಿಭಾಗದಲ್ಲಿ ರಾಕಿಂಗ್ ಸ್ಟಾರ್ ಯಶ್, ಪುನೀತ್ ರಾಜ್ ಕುಮಾರ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್ ನಂತಹ ಘಟಾನುಘಟಿ ಸ್ಟಾರ್ ಗಳಿದ್ದಾರೆ. ನಿರ್ದೇಶಕ ವಿಭಾಗದಲ್ಲೂ ಇದೇ ಪರಿಸ್ಥಿತಿ. ಹೀಗಾಗಿ ಈ ಬಾರಿಯ ಸೈಮಾ ಕನ್ನಡ ಸಿನಿಮಾ ಮಟ್ಟಿಗೆ ಹಿಂದೆಂದೂ ಕಾಣದಂತಹ ಸ್ಪರ್ಧೆ ಕಾಣಬಹುದು.