ಸಿನಿಮಾದಲ್ಲೂ’ ಜೈ’ ಲಲಿತಾ

ಮಂಗಳವಾರ, 6 ಡಿಸೆಂಬರ್ 2016 (09:18 IST)
ಚೆನ್ನೈ: ನಾನು ಯಾವುದೇ ಕ್ಷೇತ್ರಕ್ಕೆ ಬರಲಿ. ಅದು ನನಗೆ ಇಷ್ಟವಿದ್ದು ಬಂದಿದ್ದೇನೋ. ಇಷ್ಟವಿಲ್ಲದೆ ಬಂದಿದ್ದೇನೋ. ಅದು ನನಗೆ ಮುಖ್ಯವಲ್ಲ. ಆ ಕೆಲಸದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತೇನೆ. ನಾನು ಯಾವುದೇ ಕ್ಷೇತ್ರಕ್ಕೆ ಹೋದರೂ, ಅಲ್ಲಿ ನಂ.1 ಆಗಿರಲು ಇಷ್ಟಪಡುತ್ತೇನೆ.

ಹೀಗಂತ ಸಂದರ್ಶನವೊಂದರಲ್ಲಿ ನಿನ್ನೆ ವಿಧಿವಿಶರಾದ  ತಮಿಳುನಾಡು ಮುಖ್ಯಮಂತ್ರಿ ಹೇಳಿಕೊಂಡಿದ್ದರು. ಅವರು ಹಾಗೇ ಇದ್ದರು ಕೂಡ. ಸಿನಿಮಾ ರಂಗಕ್ಕೆಅವರು ಎಂಟ್ರಿಯಾಗಲು ಕಾರಣ ತಾಯಿ ಸಂಧ್ಯಾ. ಆಕೆಗೆ ಈ ಫೀಲ್ಡ್ ಇಷ್ಟವೇ ಇರಲಿಲ್ಲವಂತೆ. ಫೋಟೋ ಶೂಟ್ ಮಾಡಿಸಿಕೊಂಡಿದ್ದೂ ತಾಯಿಯ ಒತ್ತಾಯದ ಮೇರೆಗೆ.

ಬಾಲ್ಯ ನಟಿಯಾಗಿ 1961 ರಲ್ಲಿ ಆಕೆ ಚಿತ್ರರಂಗಕ್ಕೆ ಎಂಟ್ರಿಯಾದರು.  ವಿಶೇಷವೆಂದರೆ ಆಕೆಯ ಚೊಚ್ಚಲ ಸಿನಿಮಾವೇ ಇಂಗ್ಲಿಷ್ ಭಾಷೆಯಲ್ಲಾಗಿತ್ತು. ಎಪಿಸಲ್ ಎನ್ನುವ ಆಂಗ್ಲ ಸಿನಿಮಾದಲ್ಲಿ ಬಾಲ್ಯ ನಟಿಯಾಗಿ ಬೆಳ್ಳಿ ತೆರೆಗೆ ಬಂದ ಜಯಾ ಅದೇ ವರ್ಷ ಕನ್ನಡದಲ್ಲಿ ಶ್ರೀ ಶೈಲ ಮಹಾತ್ಮೆ ಚಿತ್ರದಲ್ಲಿ ನಟಿಸಿದ್ದರು.

ನಂತರ ಚಿನ್ನದ ಗೊಂಬೆ ಚಿತ್ರದಲ್ಲಿ ನಾಯಕಿಯಾದರು. ಇದಾದ ನಂತರ ಕಲ್ಯಾಣ್ ಕುಮಾರ್ ಅಭಿನಯದ ಮಾವನ ಮಗಳು, ನನ್ನ ಕರ್ತವ್ಯ ಹಾಗೂ ಬದುಕುವ ದಾರಿ ಚಿತ್ರದಲ್ಲೂ ನಾಯಕಿಯಾದರು. ಇದಾದ ಮೇಲೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಅವರು ರಾಜಕೀಯ ಗುರು ಎಂಜಿ ರಾಮಚಂದ್ರಂ ಜತೆ ಚಂದ್ರೋದಯಂ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿದರು.

ಇದಾದ ಮೇಲೆ ಆಕೆ ಕೇವಲ ತಮಿಳು ಮತ್ತು ತೆಲುಗು ಚಿತ್ರಗಳತ್ತ ಗಮನಹರಿಸಿದರು. ಆಕೆಯ ಕೊನೆಯ ತಮಿಳು ಚಿತ್ರ ಬಿಡುಗಡೆಯಾಗಿದ್ದು 1992 ರಲ್ಲಿ. ಅದಾಗಲೇ ಜಯಲಲಿತಾ ಎಂಜಿಆರ್ ಜತೆ ರಾಜಕೀಯದಲ್ಲಿ ಸಕ್ರಿಯರಾಗಿದ್ದರಲ್ಲದೆ, ಮೊದಲ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ