ಹೈದರಾಬಾದ್: ಇಬ್ಬರು ಸ್ಟಾರ್ ನಟರು ಒಂದೇ ಸಿನಿಮಾದಲ್ಲಿ ನಟಿಸಿದರೆ ಆಗುವ ಸಮಸ್ಯೆ ಏನು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ರಾಜಮೌಳಿ ನಿರ್ದೇಶಿಸಿದ್ದ ಆರ್ ಆರ್ ಆರ್ ಸಿನಿಮಾದಲ್ಲಿ ನಿಜವಾದ ನಾಯಕ ಯಾರು ಎಂಬ ಕತೆಗಾರ ವಿಜಯೇಂದ್ರ ಪ್ರಸಾದ್ ಹೇಳಿಕೆ ಈಗ ಫ್ಯಾನ್ಸ್ ನಡುವೆ ವಾರ್ ಗೆ ಕಾರಣವಾಗಿದೆ.
ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗಿದ್ದು 2022 ರಲ್ಲಿ. ರಾಮ್ ಚರಣ್ ತೇಜ ಮತ್ತು ಜ್ಯೂ.ಎನ್ ಟಿಆರ್ ಇಬ್ಬರೂ ಈ ಸಿನಿಮಾದಲ್ಲಿ ಸ್ನೇಹಿತರಾಗಿ ಅಭಿನಯಿಸಿದ್ದರು. ಸ್ಟಾರ್ ನಿರ್ದೇಶಕ ರಾಜಮೌಳಿ ಇಬ್ಬರ ಪಾತ್ರಕ್ಕೂ ಸಮಾನ ಅವಕಾಶ, ಪ್ರಾಮುಖ್ಯತೆ ನೀಡಿದ್ದರು. ಇದಾದ ಬಳಿಕ ಸಿನಿಮಾದ ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿತು. ಇದರೊಂದಿಗೆ ಜ್ಯೂ.ಎನ್ ಟಿಆರ್ ಮತ್ತು ರಾಮ್ ಚರಣ್ ಸ್ಟಾರ್ ವಾಲ್ಯೂ ಕೂಡಾ ಹೆಚ್ಚಾಯಿತು.
ಸಿನಿಮಾದಲ್ಲಿ ರಾಮ್ ಚರಣ್ ಅಲ್ಲುರಿ ಸೀತಾರಾಮರಾಜು ಪಾತ್ರ ಮಾಡಿದರೆ ಜ್ಯೂ.ಎನ್ ಟಿಆರ್ ಕೊಮರಮ್ ಭೀಮಮ್ ಪಾತ್ರ ಮಾಡಿದ್ದರು. ಇಬ್ಬರೂ ಒಬ್ಬರಿಗೊಬ್ಬರು ಹೆಗಲುಕೊಡುವ ಸ್ನೇಹಿತರಾಗಿ ಪೈಪೋಟಿಗೆ ಬಿದ್ದಂತೆ ನಟಿಸಿದ್ದರು.
ಇದರ ನಡುವೆ ಎಷ್ಟೋ ಜನ ಈ ಸಿನಿಮಾದಲ್ಲಿ ನಿಜವಾದ ನಾಯಕ ಯಾರು ಎಂದು ಪ್ರಶ್ನೆ ಮಾಡಿದ್ದು ಇದೆ. ಆದರೆ ಇದುವರೆಗೆ ರಾಜಮೌಳಿ ಒಬ್ಬರ ಹೆಸರು ಹೇಳಿಲ್ಲ. ಆದರೆ ಇದೀಗ ಕತೆಗಾಗಿ ವಿಜಯೇಂದ್ರ ಪ್ರಸಾದ್ ಈ ಸಿನಿಮಾದಲ್ಲಿ ನಿಜವಾದ ಹೀರೋ ರಾಮ್ ಚರಣ್ ಅವರು. ತಾರಕ್ ಕೇವಲ ರಾಮ್ ಚರಣ್ ಗೆ ಸಹಾಯಕ ಪಾತ್ರವಾಗಿದ್ದರು ಎಂಬ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಇಬ್ಬರೂ ಸ್ಟಾರ್ ಗಳ ಫ್ಯಾನ್ಸ್ ನಡುವೆ ವಾರ್ ತಂದು ಹಾಕಿದೆ.
ವಿಜಯೇಂದ್ರ ಪ್ರಸಾದ್ ಹೇಳಿದ್ದೇನು?: ನಾನು ಕತೆ ಬರೆಯುವಾಗ ಇಬ್ಬರಿಗೂ ಸಮಾನ ಅವಕಾಶ ಇರುವಂತೆ ಕತೆ ಬರೆದಿದ್ದೆ. ಆದರೆ ಸಿನಿಮಾ ನೋಡಿದ ಬಳಿಕ ರಾಮ್ ಚರಣ್ ಪಾತ್ರವನ್ನು ಜನ ಹೆಚ್ಚು ನೆನಪಿಟ್ಟುಕೊಳ್ಳಬಹುದು, ಅವರು ಹೀರೋ ಎನಿಸಿತು. ಕೊಮರಮ್ ಭೀಮಮ್ ಪಾತ್ರ ಮಾಡುವುದು ಕಷ್ಟ. ಅದನ್ನು ಜ್ಯೂ.ಎನ್ ಟಿಆರ್ ಅದ್ಭುತವಾಗಿ ನಿಭಾಯಿಸಿದರು. ಚರಣ್ ಪಾತ್ರಕ್ಕೆ ಅನೇಕ ಮಜಲುಗಳಿವೆ. ಎನ್ ಟಿಆರ್ ಅದನ್ನು ಪೋಷಿಸುವಂತೆ ನಟಿಸಿದರು ಎಂದಿದ್ದಾರೆ.
ಅವರ ಈ ಹೇಳಿಕೆ ಬಗ್ಗೆ ಈಗ ಜ್ಯೂ.ಎನ್ ಟಿಆರ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ರಾಮ್ ಚರಣ್ ಫ್ಯಾನ್ಸ್ ಜೊತೆ ಕಿತ್ತಾಡುತ್ತಿದ್ದಾರೆ. ನಮ್ಮ ಹೀರೋನೇ ನಿಜವಾದ ಹೀರೋ ಎಂದು ಕಿತ್ತಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಎರಡು ವರ್ಷದ ಬಳಿಕ ಫ್ಯಾನ್ಸ್ ಈ ರೀತಿ ಕಿತ್ತಾಡಲು ಕಾರಣವಾಗಿದ್ದು ವಿಪರ್ಯಾಸ.