ಆಂಧ್ರಪ್ರದೇಶ: ಇದೇ 20ರಂದು 41ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟ ಜೂನಿಯರ್ ಎನ್‌ಟಿಆರ್ ಅವರು ಆಂಧ್ರಪ್ರದೇಶದ ದೇವಸ್ಥಾನವೊಂದಕ್ಕೆ ₹12.5 ಲಕ್ಷ ದೇಣಿಗೆ ನೀಡಿದ್ದಾರೆ.
ಆಂಧ್ರಪ್ರದೇಶದ ಚೆಯ್ಯೆರುವಿನ ಶ್ರೀ ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ನಟ ಜೂನಿಯರ್ ಎನ್‌ಟಿಆರ್ ಭಾರಿ ದೇಣಿಗೆ ನೀಡಿ ಇದೀಗ ಸುದ್ದಿಯಾಗಿದ್ದಾರೆ. ನಟ ತನ್ನ ಕುಟುಂಬದೊಂದಿಗೆ ದೇವಾಲಯದ ನಿರ್ಮಾಣಕ್ಕೆ ₹ 12.5 ಲಕ್ಷ ದೇಣಿಗೆ ನೀಡಿದರು.
ಈ ಬಗ್ಗೆ ಅವರ ಅಭಿಮಾನಿಯೊಬ್ಬರು ಮೊದಲು ಎಕ್ಸ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ, "ತಾರಕ್ ಶ್ರೀ ಬದ್ರಕಾಳಿ ಸಮೇತ ವೀರ ಬದ್ರ ಸ್ವಾಮಿ ವರಿ ದೇವಸ್ಥಾನಕ್ಕೆ 12,50,000 ದೇಣಿಗೆ ನೀಡಿದ್ದಾರೆ" ಎಂದು ಬರೆದಿದ್ದಾರೆ.
ನಟನ ಆಪ್ತ ಮೂಲವೊಂದು ಮಾಧ್ಯಮಕ್ಕೆ ಮಾಹಿತಿ ನೀಡಿ, ಜೂನಿಯರ್ ಎನ್‌ಟಿಆರ್ ಅವರು ಹುಟ್ಟುಹಬ್ಬದ ಮೊದಲು ಈ ದೇಣಿಗೆ ನೀಡಿರುವುದು ನಿಜ. ಅವರು ಅದನ್ನು ತನ್ನ ತಾಯಿ (ಶಾಲಿನಿ), ಹೆಂಡತಿ (ಲಕ್ಷ್ಮಿ ಪ್ರಣತಿ) ಮತ್ತು ಮಕ್ಕಳ (ಅಭಯ್, ಬಾರ್ಘವ್) ಹೆಸರಿನಲ್ಲಿ ನೀಡಿದ್ದಾರೆ. ಅವರು ತಮ್ಮ ಪರೋಪಕಾರದ ಬಗ್ಗೆ ಹೆಚ್ಚು ಪ್ರಚಾರ ಮಾಡಲು ಇಷ್ಟಪಡುವುದಿಲ್ಲ ಎಂದಿದ್ದಾರೆ.
ಜೂನಿಯರ್ ಎನ್‌ಟಿಆರ್ ಇಂತಹ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. ಅವರು ಈ ಹಿಂದೆ ಪ್ರವಾಹ ಸಂತ್ರಸ್ತರ ನೆರವಿಗಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 25 ಲಕ್ಷ, ಚಿತ್ರರಂಗದಲ್ಲಿ ದೈನಂದಿನ ಕೂಲಿ ಕಾರ್ಮಿಕರನ್ನು ಬೆಂಬಲಿಸಲು ಕರೋನಾ ಕ್ರೈಸಿಸ್ ಚಾರಿಟಿಗೆ ₹ 25 ಲಕ್ಷ ದೇಣಿಗೆ ನೀಡಿದ್ದರು.