ಒತ್ತಡ ತಂತ್ರ ಎಂದಿದ್ದ ಜೇಟ್ಲಿಗೆ ಪ್ರಾದೇಶಿಕ ಸಿನಿಮಾಗಳ ಪರಿಸ್ಥಿತಿ ಬಗ್ಗೆ ತಿಳಿ ಹೇಳಿದ ಕಮಲ್ ಹಾಸನ್
ಮಂಗಳವಾರ, 6 ಜೂನ್ 2017 (16:47 IST)
ಸಿನಿಮಾಗಳ ಮೇಲೆ ಶೇ. 28ರಷ್ಟು ಜಿಎಸ್`ಟಿ ಏರಿಕೆ ಬಗ್ಗೆ ಕಮಲ್ ನೀಡಿದ್ದ ಹೇಳಿಕೆಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ, ಮಾಧ್ಯಮಗಳ ಮೂಲಕ ಒತ್ತಡ ಹೇರಿದರೆ ಏನೂ ಬದಲಾಗುವುದಿಲ್ಲ ಎಂದು ಕುಟುಕಿದ್ದರು. ಜೇಟ್ಲಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, ಪ್ರಾದೇಶಿಕ ಚಿತ್ರಗಳ ಮೇಲೆ ಹೆಚ್ಚು ಭಾರ ಹಾಕಬೇಡಿ ಎಂದು ತಿರುಗೇಟು ನೀಡಿದ್ದಾರೆ.
ನಾವು ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ. ಪ್ರಾದೇಶಿಕ ಸಿನಿಮಾ ರಂಗದ ಪರವಾಗಿ ಜಿಎಸ್`ಟಿ ಕಡಿತಗೊಳಿಸುವಂತೆ ಕೇಳಿಕೊಂಡಿದ್ಧೇನೆ. ಶೇ. 28ರಂದು ತೆರಿಗೆ ವಿಧಿಸುವುದರಿಂದ ಪ್ರಾದೇಶಿಕ ಸಿನಿಮಾ ರಂಗದ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಸಿನಿಮಾ ರಂಗವೆ ನಶಿಸಿಹೋಗುತ್ತದೆ. ಸಿನಿಮಾ ರಂಗ ರಕ್ಷಿಸುವಂತೆ ಮನವಿ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಜಿಎಸ್`ಟಿ ಜಾರಿಯನ್ನ ಸ್ವಾಗತಿಸಿರುವ ವಿಶ್ವರೂಪಂ ನಟ, ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಿಗೆ ವಿಧಿಸಿದ ರೀತಿಯೇ ಪ್ರಾದೇಶಿಕ ಸಿನಿಮಾಗಳಿಗೂ ಶೇ.28ರಷ್ಟು ಜಿಎಸ್`ಟಿ ಏರಿಕೆ ಸರಿಯಲ್ಲ ಎಂದಿದ್ದಾರೆ. ಹೊಸ ತೆರಿಗೆ ಪದ್ಧತಿ ಅನುಕೂಲಕರವಾಗಿಲ್ಲವೆಂದಾದರೆ ಸಿನಿಮಾದಿಂದ ದೂರ ಉಳಿಯದೇ ವಿಧಿ ಇಲ್ಲ ಎಂದಿದ್ದಾರೆ.