ಬೆಂಗಳೂರು: ರಾಷ್ಟ್ರಕ್ಕೆ ಸಂಬಂಧಿಸಿದ ವಿಚಾರದಲ್ಲಿ ತಪ್ಪಾಗಿ ಮಾತನಾಡಿದ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ ಅವರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಕಾಂಗ್ರೆಸ್ ನಾಯಕರು ಇಷ್ಟೇನಾ ಗೊತ್ತಿರುವುದು ಎಂದು ಲೇವಡಿ ಮಾಡಿದ್ದಾರೆ.
ತಮ್ಮ ನಟನೆ ಮುಂಬರುವ ಎಮರ್ಜೆನ್ಸಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಕಂಗನಾ ಅವರು ಈಚೆಗೆ ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು.
ಈ ವೇಳೆ ಭಾರತದ ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಎಂದು ಹೇಳುವ ಬದಲು 'ರಾಮ್ ಕೋವಿಡ್' ಎಂದು ಹೇಳಿ ತಗ್ಲಾಕೊಂಡಿದ್ದಾರೆ. ಅದಲ್ಲದೆ ದಲಿತರನ್ನು 'ಗಾಲಿಟ್' ಎಂದು ಹೇಳಿದ್ದು, ತಕ್ಷಣವೇ ಅದನ್ನು ಸರಿಮಾಡಿಕೊಂಡಿದ್ದಾರೆ. ರಾಮ್‌ನಾಥ್ ಕೋವಿಂದ್ ಅವರು ಮೊದಲ ದಲಿತ ರಾಷ್ಟ್ರಪತಿ ಎಂದು ತಪ್ಪು ಮಾಹಿತಿಯನ್ನು ಹೇಳಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕಂಗನಾ ವಿಡಿಯೋ ತುಣುಕು ಭಾರೀ ಸದ್ದು ಮಾಡುತ್ತಿದೆ.
ದ್ರೌಪದಿ ಮುರ್ಮು ಮತ್ತು ರಾಮ್ ನಾಥ್ ಕೋವಿಂದ್ ಬಗ್ಗೆ ಪ್ರಸ್ತಾಪಿಸುವಾಗ, ಕೋವಿಂದ್ ಅವರು ಭಾರತದ ಮೊದಲ ದಲಿತ ರಾಷ್ಟ್ರಪತಿ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 6ರಂದು ಕಂಗನಾ ಅವರು ನಟಿಸಿ, ಆ್ಯಕ್ಷನ್ ಕಟ್ ಹೇಳಿರುವ ಎಮರ್ಜೆನ್ಸಿ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಕಂಗನಾ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಅದಲ್ಲದೆ ಕಂಗನಾಗೆ ಜೀವಬೆದರಿಕೆಯನ್ನು ಹಾಕಲಾಗಿದೆ. ಚಿತ್ರದ ಪಾತ್ರವರ್ಗದಲ್ಲಿ ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್ ಮತ್ತು ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ.