ಹುಲಿರಾಯ ಚಿತ್ರದ ವಿಶೇಷವಾದ ಮೋಷನ್ ಪೋಸ್ಟರ್ ಅನ್ನು ಹಿರಿಯ ಛಾಯಾಗ್ರಾಹಕರಾದ ಅಶೋಕ್ ಕಶ್ಯಪ್ ಅವರು ಬಿಡುಗಡೆಗೊಳಿಸಿದರು. ಈ ಚಿತ್ರದ ನಿರ್ದೇಶಕರಾದ ಅರವಿಂದ್ ಕೌಶಿಕ್ ಈ ಸಂದರ್ಭದಲ್ಲಿ ತಮ್ಮ ಸಿನಿ ಯಾನ, ಮಧ್ಯದಲ್ಲಿ ಬಂದೊದಗಿದ ನಾಲ್ಕೈದು ವರ್ಷಗಳ ಸುದೀರ್ಘ ವಿರಾಮ ಮುಂತಾದವುಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಇದೀಗ ನಾಯಕ ನಟನಾಗಿ ಬೇಡಿಕೆಯಲ್ಲಿರುವ ಅನೀಶ್ ತೇಜೇಶ್ವರ್ ಕೂಡಾ ಹಾಜರಿದ್ದರು. ಅನೀಶ್ ತಮ್ಮನ್ನು ನಾಯಕ ನಟನಾಗಿ ಪರಿಚಯಿಸಿದ ಇದೇ ಅರವಿಂದ ಕೌಶಿಕ್ ನಿರ್ದೇಶನದ ನಮ್ ಏರಿಯಾಲ್ ಒಂದಿನ ಚಿತ್ರದ ಗುಂಗಿಗೆ ಜಾರಿ ಅದರ ಪಾರ್ಟ್ 2 ಮಾಡಬೇಕೆಂಬ ಇಂಗಿತವನ್ನೂ ವ್ಯಕ್ತಪಡಿಸಿದರು. ನಮ್ ಏರಿಯಾಲ್ ಒಂದಿನ ಚಿತ್ರದ ಡೈಲಾಗುಗಳನ್ನು ಹೇಳುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.
ಆ ನಂತರದಲ್ಲಿ ತೆರೆದುಕೊಂಡಿದ್ದ ಹುಲಿರಾಯ ಕಥೆ ಹುಟ್ಟಿದ ಬಗೆ ಮತ್ತು ಚಿತ್ರೀಕರಣದ ನಾನಾ ಮಜಲುಗಳು. ಏನಾದರೂ ಹೊಸತನ್ನು ಮಾಡಬೇಕೆಂಬ ಹಂಬಲ ಹೊಂದಿದ್ದ ಈ ಚಿತ್ರದ ನಾಯಕ ಬಾಲು ನಾಗೇಂದ್ರ ಮತ್ತು ಅರವಿಂದ ಕೌಶಿಕ್ ಸೇರಿಕೊಂಡು ಕಂಡ ಕನಸು ಹುಲಿರಾಯ. ಅರವಿಂದ್ ಬಾಲು ಅವರನ್ನೇ ಗಮನದಲ್ಲಿಟ್ಟುಕೊಂಡು ಈ ಚಿತ್ರದ ಕಥೆ ಮಾಡಿಕೊಂಡಿದ್ದರಂತೆ. ಆದರೆ ಚಿತ್ರವನ್ನು ಮಾಡೇ ಬಿಡುವ ನಿರ್ಧಾರಕ್ಕೆ ಬಂದರಾದರೂ ನಿರ್ಮಾಪಕರಿನ್ನೂ ಸಿಕ್ಕಿರಲಿಲ್ಲ.
ಅಂದಹಾಗೆ ನಿರ್ದೇಶಕ ಅರವಿಂದ್ ಕೌಶಿಕ್ ಅವರು ಹುಲಿರಾಯ ಕಥೆಯ ಸಣ್ಣ ಎಳೆಯನ್ನಷ್ಟೇ ಕುತೂಹಲಕರವಾಗಿ ಹೊರ ಬಿಟ್ಟಿದ್ದಾರೆ. ಹುಲಿ ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಪ್ರಾಣಿ. ಒಂದು ವೇಳೆ ಅದೇ ಹುಲಿ ಬೆಂಗಳೂರಿನಂಥಾ ಸಿಟಿಗೆ ಬರುವಂತಾದರೆ ಏನಾಗ ಬಹುದು, ಎಂತೆಂಥಾ ಅನಾಹುತಗಳಾದೀತೆಂಬ ಎಳೆಯೊಂದಿಗೆ ಬೆಂಗಳೂರಿನಂಥಾ ಮಹಾ ನಗರಿಗಳ ಜಂಜಡ, ಒತ್ತಡಗಳನ್ನ ಬೇರೆಯದ್ದೇ ರೀತಿಯಲ್ಲಿ ಹೇಳುವ ಭಿನ್ನ ಪ್ರಯತ್ನ ಈ ಚಿತ್ರದಲ್ಲಿದೆಯಂತೆ. ಈ ಕಥಾ ವಸ್ತು ಇನ್ನು ಹತ್ತದಿನೈದು ವರ್ಷವಾದರೂ ಸವಕಲಾಗದಂಥಾದ್ದೆಂಬುದು ನಿರ್ದೇಶಕರ ಭರವಸೆ.