’ನಮ್ಮವರು’ ಚಿತ್ರದ ಬಗ್ಗೆ ಚಿತ್ರತಂಡ ಬಿಚ್ಚಿಟ್ಟ ಘಟನೆಗಳು

ಗುರುವಾರ, 22 ಡಿಸೆಂಬರ್ 2016 (11:38 IST)
ಈವರೆಗೆ 12 ಪೌರಾಣಿಕ ಹಾಗೂ ಐತಿಹಾಸಿಕ ಚಿತ್ರಗಳನ್ನು ನಿರ್ದೇಶಿಸಿದ ಬಿ.ಎ.ಪುರುಷೋತ್ತಮ್ ಪಗಡೆ, ಮತ್ತೆ ಬಂದ ವೀರಪ್ಪನ್‍ನಂಥ ಸಸ್ಪೆನ್ಸ್ ಕಾಮಿಡಿ ಚಿತ್ರಗಳನ್ನೂ ನಿರ್ದೇಶನ ಮಾಡಿದ್ದಾರೆ. ಅದಾದ ಮೇಲೆ ಮತ್ತೊಂದು ಸಂಪೂರ್ಣ ಸಾಂಸಾರಿಕ ಕಥಾಹಂದರ ಹೊಂದಿದ ನಮ್ಮವರು ಎಂಬ ಚಿತ್ರವನ್ನು ಈ ವರ್ಷದ ಸಂಕ್ರಾಂತಿಯಂದು ಆರಂಭಿಸಿದ್ದರು. ಈಗ ಆಚಿತ್ರ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದ್ದು, ಮುಂದಿನ ತಿಂಗಳ ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಲು ಸಿದ್ದವಾಗುತ್ತಿದೆ. 
 
ಕಳೆದ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹನಟರಾಗಿ, ಪೋಷಕ ಕಲಾವಿದನಾಗಿ ಗುರುತಿಸಿಕೊಂಡಿರುವ ಗಣೇಶ್‍ರಾವ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.  ಇದು ಅವರ ಅಭಿನಯದ 150ನೇ ಚಿತ್ರ ಕೂಡ. ಶ್ರೀಮತಿ. ಉಷಾ ಪುರುಷೋತ್ತಮ್ ಹಾಗೂ ಶ್ರೀಮತಿ. ಆಶಾ ಮುನಿಯಪ್ಪ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಬಿ.ಎ.ಪುರುಷೋತ್ತಮ್ ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. 
 
ಮೊನ್ನೆ ಈ ಚಿತ್ರದ ಟೀಸರ್ ಹಾಗೂ ಹಾಡಿನ ಅನಾವರಣ ಸಮಾರಂಭ ನಡೆಯಿತು. ಜೆಡಿಎಸ್ ವಕ್ತಾರ ಗಂಗಾಧರ್ ನಮ್ಮವರು ಚಿತ್ರದ ಟೀಸರ್ ಅನಾವರಣಗೊಳಿಸಿದರು. ನಿರ್ದೇಶಕ ಬಿ.ಎ.ಪುರುಷೋತ್ತಮ್ ಮಾತನಾಡುತ್ತಾ, ನಾನು ನಿರ್ದೇಶಿಸಿರುವ 16ನೇ  ಚಿತ್ರವಿದು. ಆರಂಭದಿಂದ  ಐತಿಹಾಸಿಕ ಹಾಗೂ ಪೌರಾಣಿಕ ಚಿತ್ರಗಳನ್ನೇ ಮಾಡಿಕೊಂಡು ಬಂದ ನಾನು ಮೊದಲ ಬಾರಿಗೆ ಕೌಟುಂಬಿಕ ಕಥಾವಸ್ತುವನ್ನು ನಿರ್ದೇಶಿಸಿದ್ದೇನೆ. 
 
ಒಂದು ಸಾಮಾಜಿಕ ಸಂದೇಶವುಳ್ಳ ಚಿತ್ರವಾಗಿ “ನಮ್ಮವರು” ಮೂಡಿಬಂದಿದೆ.  ಮೊನ್ನೆತಾನೆ ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಉತ್ತಮ ಫ್ಯಾಮಿಲಿ ಎಂಟರ್‍ಟೈನರ್ ಎಂದು ಪ್ರಶಂಸಿಸಿ ಯು ಸರ್ಟಿಫಿಕೇಟ್ ನೀಡಿದೆ.  ಈ ಚಿತ್ರ ನೋಡಿದವರಿಗೆಲ್ಲಾ  ಇದು ನಮ್ಮ ಮನೆಯಲ್ಲಿ ನಡೆದ ಕಥೆಯಲ್ಲವೇ ಅನ್ನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರೀತಿ-ಸಂಬಂಧ ದೂರವಾಗಿದೆ.  ತಂದೆ-ತಾಯಿಯಾದವರು ತಮ್ಮ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು, ಅಲ್ಲದೆ ಮಕ್ಕಳಾದವರು ತಮ್ಮ ತಂದೆ-ತಾಯಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂಬುದನ್ನು ನಮ್ಮವರು ಚಿತ್ರದಲ್ಲಿ ಹೇಳಲಾಗಿದೆ. 
 
ನಮ್ಮ ಸಹಾಯಕ ನಿರ್ದೇಶಕರಾದ ವಿಷ್ಣು ಒಳ್ಳೇ ಕಥೆಯನ್ನು ಮಾಡಿದ್ದರು. ಆ ಕಥೆಯನ್ನಿಟ್ಟುಕೊಂಡು  ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದೇನೆ. ಈ ಚಿತ್ರದಲ್ಲಿನ ಪ್ರತಿ ದೃಷ್ಯವೂ ಒಂದು ಸಂದೇಶವನ್ನು  ಹೇಳುತ್ತದೆ. ಸಾಮಾನ್ಯವಾಗಿ ಚಿತ್ರದಲ್ಲಿ ಒಂದು ಮೆಸೇಜ್ ಇರುತ್ತದೆ. ಆದರೆ ನಮ್ಮ ಚಿತ್ರದಲ್ಲಿ 6 ಸಂದೇಶಗಳಿವೆ. ಇಲ್ಲಿ ಕಥೆಯೇ ಹೀರೋ ಆಗಿದ್ದು,  ನಟ ಗಣೇಶ್‍ರಾವ್ ಕೇಸರಕರ್, ಹಿರಿಯ ನಟಿ ಶ್ರೀಮತಿ ಜಯಲಕ್ಷ್ಮಿ, ಜ್ಯೋತಿ ಸುರಕ್ಷಾ, ಮಲ್ಲಿಕಾರ್ಜುನ್, ಜಮ್ ಶಿವು ಅಲ್ಲದೆ ಹಿರಿಯ ಕಲಾವಿದ ಶ್ರೀನಿವಾಸಮೂರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 
 
ಮಾ.ಚಿನ್ಮಯಿ ಮೊಮ್ಮಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮುತ್ತುರಾಜ್ ಸುಂದರವಾಗಿ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ರಾಜ್ ಭಾಸ್ಕರ್ ಅವರ ಸಂಗೀತ ಈ ಚಿತ್ರದ ಹೈಲೈಟ್ ಎಂದು ಹೇಳಿದರು. ನಂತರ ನಟ ಗಣೇಶ್‍ರಾವ್ ಮಾತನಾಡಿ ಇದು ನನ್ನ ಅಭಿನಯದ 150ನೇ ಚಿತ್ರ. ಸಂಕ್ರಾಂತಿಯಂದು ಆರಂಭವಾದ ಈ ಚಿತ್ರ ಸಂಕ್ರಾಂತಿಯಂದೇ ರಿಲೀಸ್ ಆಗುತ್ತಿದೆ. ಈ 
ಚಿತ್ರದಲ್ಲಿ ಕಥೆಯೇ ಪ್ರಮುಖ ಪಾತ್ರಧಾರಿ. ಕೆಲ ದೃಷ್ಯಗಳಲ್ಲಿ  ಗ್ಲಿಸರಿನ್ ಹಾಕದೇ ನಾನು ಹಾಗೂ ಜಯಲಕ್ಷ್ಮಿ ಮೇಡಂ  ಅತ್ತಿದ್ದೇವೆ.  ಚಿತ್ರದಲ್ಲಿ ಕಥೆಯೇ  ಪ್ರಮುಖ ಪಾತ್ರದಾರಿ.  
 
ವೃದ್ಧಾಶ್ರಮದ ಮುಂದೆ ಮಗ ತನ್ನ ತಾಯಿಗೆ ನಾನೇ ನಿನ್ ಮಗ ಅಂತ ಇಲ್ಲಿ ಎಲ್ಲರ ಮುಂದೆ ಹೇಳಬೇಡ ಎಂದು ಸೂಚಿಸುತ್ತಾನೆ, ಈ ಥರದ ಹಲವಾರು ಮನಕಲಕುವ ದೃಶ್ಯಗಳು ಈ  ಚಿತ್ರದಲ್ಲಿವೆ ಎಂದು ಹೇಳಿಕೊಂಡರು. ಚಿತ್ರದ ನಿರ್ಮಾಪಕರಾದ ಮುನಿಯಪ್ಪ  ಮಾತನಾಡುತ್ತ ನಾವು ಹಳ್ಳಿಗಾಡಿನಿಂದ ಬಂದವರು. ನಮ್ಮ ಪತ್ನಿ ಆಶಾ ಅಭಿನಯ ತರಂಗದಲ್ಲಿ ಕಲಿತವರು, ಸಮಾಜಕ್ಕೊಂದು ಸಂದೇಶವನ್ನು ನೀಡಬೇಕೆಂದು ಈ ಚಿತ್ರವನ್ನು ಮಾಡಿದ್ದೇವೆ ಎಂದು ಹೇಳಿಕೊಂಡರು. 
 
ನಟಿ ಜಯಲಕ್ಷ್ಮಿ ಮಾತನಾಡಿ ಈಗಿನ ಚಿತ್ರಗಳಲ್ಲಿ ತಾಯಿ ಪಾತ್ರಕ್ಕೆ ಪ್ರಾಮುಖ್ಯತೆ ತುಂಬಾ ಕಮ್ಮಿಯಾಗಿದೆ. ಈ ಚಿತ್ರದಲ್ಲಿ ನನಗೆ ಒಳ್ಳೇ ಪಾತ್ರವನ್ನು ಕೊಟ್ಟಿದ್ದಾರೆ. ನಮ್ಮ ಸುತ್ತ ನಡೆವಂಥ ಕಥೆ ಇದರಲ್ಲಿದೆ. ಇಡೀ ಚಿತ್ರ ನೈಜವಾಗಿ ಮೂಡಿಬಂದಿದೆ. ಎಲ್ಲೂ ಕೃತಕತೆ ಅನ್ನಿಸಲ್ಲ ಎಂದು ಹೇಳಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ