ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದ ಕೇಜ್ರಿವಾಲ್

ಗುರುವಾರ, 5 ಮಾರ್ಚ್ 2015 (13:12 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನೈಸರ್ಗಿಕ ಚಿಕಿತ್ಸೆ ಪಡೆಯುವ ಸಲುವಾಗಿ ಇಂದು ನಗರದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. 
 
ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಪ್ರಯಾಣಕ್ಕಾಗಿ ಕರ್ನಾಟಕ ಸರ್ಕಾರ ಸರ್ಕಾರಿ ವಾಹನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಆ ವಾಹನಗಳಲ್ಲಿ ಪ್ರಯಾಣಿಸಲು ಕೇಜ್ರಿವಾಲ್ ನಿರಾಕರಿಸಿದ್ದು, ತಮ್ಮ ಪಕ್ಷದ ಕಾರ್ಯಕರ್ತರೋರ್ವರ ಖಾಸಗಿ ಕಾರಿನಲ್ಲಿ ಸಂಚರಿಸಲು ಇಚ್ಚಿಸಿದರು ಎನ್ನಲಾಗಿದ್ದು, ಖಾಸಗಿ ಕಾರಿನಲ್ಲಿ ಏರಿ ವಿಮಾನ ನಿಲ್ದಾಣದಿಂದ ನೇರವಾಗಿ ನಗರದ ತುಮಕೂರು ರಸ್ತೆಯಲ್ಲಿರುವ ಜಿಂದಾಲ್ ಆಸ್ಪತ್ರೆಗೆ ತೆರಳಿದರು. 
 
ಕೇಜ್ರಿವಾಲ್ ಅವರು ಇಂದಿನಿಂದ 10 ದಿನಗಳ ಕಾಲ ಈ ಆಸ್ಪತ್ರೆಯಲ್ಲಿ ತಂಗಲಿದ್ದು, ಚಿಕಿತ್ಸೆ ಪಡೆಯಲಿದ್ದಾರೆ. ಆಸ್ಪತ್ರೆಯ ವೈದ್ಯೆ ಡಾ. ಬಬಿತಾ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಫ, ಮದುಮೇಹ, ಹಾಗೂ ಕೆಮ್ಮಿಗೆ ಚಿಕಿತ್ಸೆ ನೀಡಲಾಗುತ್ತದೆ ಎನ್ನಲಾಗಿದೆ. ಚಿಕಿತ್ಸಾ ವೇಳೆಯಲ್ಲಿ ಯೋಗ, ಪ್ರಾಣಾಯಾಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. 
 
ಇನ್ನು ಎಎಪಿ ಪಕ್ಷದ ರಾಜ್ಯದಲ್ಲಿನ ಮುಖಂಡರು ಹಾಗೂ ಕಾರ್ಯಕರ್ತರಿಗೆ ಯಾವುದೇ ಕಾರಣಕ್ಕೂ ಕೂಡ ಆಸ್ಪತ್ರೆಗೆ ಭೇಟಿ ನೀಡಬಾರದು ಎಂದು ಈಗಾಗಲೇ ಮನವಿ ಮಾಡಲಾಗಿದ್ದು, ಭೇಟಿಗೆ ಅವಕಾಶ ಕೂಡ ಮಾಡಿಕೊಟ್ಟಿಲ್ಲ. ಆದರೆ ಚಿಕಿತ್ಸೆ ಪಡೆದು ವಾಪಾಸಾಗುವ ಕೊನೆಯ ದಿನದಂದು ರಾಜ್ಯ ಕಾರ್ಯಕರ್ತರೊಂದಿಗೆ ಕೇಜ್ರಿವಾಲ್ ಸಂವಾದ ನಡೆಸಲಿದ್ದಾರೆ. ಅಲ್ಲದೆ ಸುದ್ದಿಗೋಷ್ಠಿಯನ್ನೂ ಕರೆಯಲಿದ್ದು, ಹಲವು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂಬುದಾಗಿ ವಿಶ್ವಾಸನೀಯ ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ