ಹೃದಯಾಘಾತ: ಆಸ್ಪತ್ರೆಗೆ ದಾಖಲಾದ ಮಣಿರತ್ನಂ

ಬುಧವಾರ, 6 ಮೇ 2015 (12:46 IST)
ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಿರ್ದೇಶಕ ಮಣಿರತ್ನಂ ಅವರಿಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಳೆದ ರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ದೆಹಲಿಯ ಇಂದ್ರಪ್ರಸ್ಥ ಬಳಿಯ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಯಿತು.
 
ಅವರು ಹೃದಯ ಸಂಬಂಧಿ ಸಮಸ್ಯೆಗೊಳಗಾಗಿದ್ದಾರೆ ಎಂದು ವೈದ್ಯರಾಗಲಿ, ಕುಟುಂಬದವರಾಗಲಿ ಖಚಿತಪಡಿಸಿಲ್ಲ. ಆದರೆ ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
 
ಮಣಿರತ್ನಂ ಆರೋಗ್ಯ ಸ್ಥಿತಿ ಕುರಿತು ಪ್ರತಿಕ್ರಿಯಿಸಲು ಅವರ ಕುಟುಂಬ ವರ್ಗ ನಿರಾಕರಿಸಿದೆ.
 
ಪ್ರಖ್ಯಾತ ಚಿತ್ರನಟಿ ಸುಹಾಸಿನಿ ಅವರ ಪತಿಯಾಗಿರುವ ಮಣಿರತ್ನಂ ಅವರಿಗೆ ಈ ಮೊದಲು 3 ಸಲ ಹೃದಯಾಘಾತವಾಗಿದ್ದು, 2004ರಲ್ಲಿ ಮೊದಲ ಬಾರಿ ಹೃದಯಾಘಾತದ ಅನುಭವವಾಗಿತ್ತು. 
 
ತಮಿಳು ಸಿನಿಮಾ ರಂಗದಲ್ಲಿ ಕ್ರಾಂತಿ ಮಾಡಿ, ಅದರ ಛಾಪನ್ನು ಭಾರತದಾದ್ಯಂತ ಹರಡಿದರು. ತಮ್ಮ ಚಿತ್ರಗಳಲ್ಲಿ ಛಾಯಾಚಿತ್ರಣಕ್ಕೆ ಮತ್ತು ಬೆಳಕಿಗೆ ಮಹತ್ವ ನೀಡಿ ಅದರಿಂದ ವಿಶಿಷ್ಟ ಶೈಲಿಯನ್ನು  ಸೃಷ್ಟಿಸಿರುವ ಮಣಿರತ್ನಂ, 1983ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ನಿರ್ದೇಶಿಸಿದ ಮೊದಲ ಚಿತ್ರ ಕನ್ನಡದ 'ಪಲ್ಲವಿ ಅನು ಪಲ್ಲವಿ'.
 
'ಮೌನರಾಗಂ', 'ನಾಯಗನ್', 'ಅಗ್ನಿ ನಕ್ಷತ್ರಂ', 'ಗೀತಾಂಜಲಿ', 'ಅಂಜಲಿ', 'ರೋಜಾ', 'ತಿರುಡಾ ತಿರುಡಾ', 'ಬಾಂಬೆ', 'ಇರುವರ್', 'ದಿಲ್ ಸೇ', 'ಅಲೈ ಪಾಯುದೆ', 'ಕಣ್ಣತ್ತಿಲ್ ಮುತ್ತಮಿಟ್ಟಾಳ್' ಮತ್ತು 'ಯುವಾ' ಇವರು ನಿರ್ದೇಶಿಸಿದ ಪ್ರಖ್ಯಾತ ಚಿತ್ರಗಳಾಗಿವೆ.

ವೆಬ್ದುನಿಯಾವನ್ನು ಓದಿ