ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಕ್ಲಾಸ್ ಅಲ್ಲ ಮಾಸ್

ಶುಕ್ರವಾರ, 26 ಡಿಸೆಂಬರ್ 2014 (14:00 IST)
"ನಾವು ಕ್ಲಾಸ್ ಅಲ್ಲ ಮಾಸ್" ಎಂದು ಹೇಳುವಂತೆ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಸ್ವಲ್ಪ ಹಾಸ್ಯ, ಹೆಚ್ಚು ಆಕ್ಷನ್,  ಇರುವ ಪಕ್ಕಾ ಮಾಸ್ ಮನರಂಜನಾ ಸಿನೆಮಾ. 
 
ನಾಯಕನ ಅಣ್ಣ ಓದಿನಲ್ಲಿ ಚುರುಕು. ಮುಂದೊಂದು ದಿನ ಉನ್ನತ ಹುದ್ದೆಯನ್ನು ಅಲಂಕರಿಸಿ ಕುಟುಂಬಕ್ಕೆ ಗೌರವ ತರುತ್ತಾನೆ ಎನ್ನುವ ದಿವ್ಯ ನಂಬಿಕೆ ನಾಯಕನ ತಂದೆಯದ್ದು. ಆದರೆ, ನಾಯಕನಿಗೆ ಮಾತ್ರ ತಂದೆ ವಿರೋಧ. ಪ್ರತಿನಿತ್ಯ ಕಿರಿಕ್ ತರುತ್ತಾನೆ ಎನ್ನುವ ಆಕ್ರೋಶ.  

ಎಲ್ಲಾ ಸಿನೆಮಾಗಳಲ್ಲಂತೆ ಇದರಲ್ಲೂ ನಾಯಕ ರಾಮಾಚಾರಿಗೆ ತನ್ನ ಕಾಲೇಜಿನಲ್ಲಿಯೇ ಓದುತ್ತಿರುವ ವಿದ್ಯಾರ್ಥಿನಿ (ರಾಧಿಕಾ ಪಂಡಿತ್)ಯೊಂದಿಗೆ ಲವ್ ಶುರು. ಆದರೆ, ತಾನು ಪ್ರೀತಿಸುತ್ತಿರುವ ಯುವತಿ ತನ್ನ ಗೆಳೆಯನ ತಂಗಿ ಎಂದು ತಿಳಿದು ಪ್ರೀತಿಯನ್ನು ಮೌನವಾಗಿ ಎದೆಯ ಗೂಡಿನಲ್ಲಿ ಅಡಗಿಸಿಟ್ಟುಕೊಳ್ಳುತ್ತಾನೆ. ಆದರೆ, ನಾಯಕಿ ಬಿಡಬೇಕಲ್ಲ. ತನ್ನ ಅಣ್ಣನಿಗೆ ಪ್ರೀತಿಯ ವಿಷಯ ತಿಳಿಸಿದಾಗ ಅವನು ಅದಕ್ಕೆ ಸಮ್ಮತಿ ಸೂಚಿಸುತ್ತಾನೆ. ನಂತರ ಬರುವ ಒಂದೆರಡು ಹಾಡುಗಳು ನಾಯಕ, ನಾಯಕಿಯ ಸರಸ ಸಲ್ಲಾಪಗಳು ಪ್ರೇಕ್ಷಕರಿಗೆ ಮನರಂಜನೆ ಒದಗಿಸುತ್ತವೆ. 
 
ರಾಮಾಚಾರಿಯ ಅಣ್ಣನನ್ನು ಓದಿಸಿದ್ದ, ತನ್ನ ಕುಟುಂಬ ಗೆಳೆಯನ(ಶ್ರೀನಾಥ್) ಮಗಳನ್ನು ತನ್ನ ಅಣ್ಣ ವರಿಸಬೇಕಿರುತ್ತದೆ. ಆದರೆ ಅಣ್ಣ ಓಡಿ ಹೋಗುತ್ತಾನೆ. ಇದರಿಂದ ನೊಂದ ಅಪ್ಪ ಆಸ್ಪತ್ರೆ ಸೇರುತ್ತಾನೆ. ಈ ಮಧ್ಯೆದಲ್ಲಿ ಮಾರ್ಗರೆಟ್ ಳ ಹುಟ್ಟು ಹಬ್ಬಕ್ಕೆ ವಿಶ್ ಮಾಡುವುದನ್ನು ಮರೆಯುತ್ತಾನೆ. ಇವರಿಂದ ವಿರಸ ವಿಪರೀತಗೊಂಡು, ಸಂಬಂಧ ಕಡಿತಗೊಳ್ಳುತ್ತದೆ. ಮಾರ್ಗರೆಟ್ ಮತ್ತೆ ದಿವ್ಯ(ಮೂಲ ಹೆಸರು) ಆಗಿಬಿಡುತ್ತಾಳೆ. ಆಗ ತನ್ನ ಅಣ್ಣ ವರಿಸಬೇಕಿದ್ದ ಹುಡುಗಿಯನ್ನು ತನ್ನ ತಂದೆಯ ಒತ್ತಡದಿಂದ ರಾಮಾಚಾರಿ ವರಿಸಲು ಒಪ್ಪಿಕೊಳ್ಳುತ್ತಾನೆ. ಅಲ್ಲಿ ಮಾರ್ಗರೆಟ್‌ಗೂ ಅಮೇರಿಕಾದ ಸಂಬಂಧ(ಧ್ಯಾನ್) ಒಲಿದು ಬರುತ್ತದೆ. ಚಿತ್ರದುರ್ಗದಲ್ಲಿ ಎರಡೂ ಸಂಬಂಧಗಳ ಮದುವೆ ಒಂದೇ ದಿನ ನಿಗದಿಯಾಗುತ್ತದೆ. ಮುಂದೇನಾಗುತ್ತದೆ? 
 
ಸಿನೆಮಾದಲ್ಲಿ ಕೆಲವೊಮ್ಮೆ ಸನ್ನಿವೇಶಗಳು ಅಧಿಕಪ್ರಸಂಗವಾಗಿವೆ ಎನ್ನಿಸಿದರೂ ಪ್ರೇಕ್ಷಕರಿಗೆ ಬೋರ್ ಹೊಡೆಯುವುದಿಲ್ಲ. ನಾಯಕ ಯಶ್ ನಟನೆಯಲ್ಲಿ ಸ್ವಲ್ಪ ಎಡವಿದ್ದಾರೆ. ಆದರೆ, ನಾಯಕಿ ರಾಧಿಕಾ ಪಂಡಿತ್ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ರಾಮಾಚಾರಿ ಅಪ್ಪನ ಪಾತ್ರದಲ್ಲಿ ಅಚ್ಯುತ್ ಕುಮಾರ್ ಅವರದ್ದು ಅತ್ಯುತ್ತಮ ಅಭಿನಯ. ಅಪ್ಪ ಮತ್ತು ಮಗನ ಸಂಬಂಧದ ಕೆಲವು ದೃಶ್ಯಗಳು ಪ್ರೇಕ್ಷಕರನ್ನು ಭಾವಪರವಶತೆಯಲ್ಲಿ ಮುಳುಗಿಸುತ್ತವೆ. 

                                                                 ಬುಕ್ ಮೈ ಶೋಗಾಗಿ ಇಲ್ಲಿ ಕ್ಲಿಕ್ ಮಾಡಿ 
 
ಮಾರ್ಗರೆಟ್ ತಾಯಿಯ ಪಾತ್ರದಲ್ಲಿ ಮಾಳವಿಕ ಅವರದ್ದು ಕೂಡ ಒಳ್ಳೆಯ ಅಭಿನಯ. ಕೊನೆಯಲ್ಲಿ ಬರುವ ಸಾಧುಕೋಕಿಲಾ ಅವರ ಹಾಸ್ಯ ದೃಶ್ಯಾವಳಿ ಕೂಡ ಜನರಲ್ಲಿ ಮಂದಹಾಸ ಮೂಡಿಸುತ್ತದೆ. ಹರಿಕೃಷ್ಣ ಅವರ ಸಂಗೀತ ಕೂಡ ಚಲನಚಿತ್ರಕ್ಕೆ ಮಿಳಿತವಾಗಿದೆ. ಹಿನ್ನಲೆಯಲ್ಲಿ ಆಗಾಗ ಮೂಡುವ ನಾಗರಹಾವಿನ ಹಿನ್ನಲೆ ಸಂಗೀತ ಹಿತವಾಗಿದೆ.  ಒಟ್ಟಿನಲ್ಲಿ ಸಂತೋಷ್ ಆನಂದರಾಮ್ ವರ್ಷಾಂತ್ಯಕ್ಕೆ ಒಂದು ಒಳ್ಳೆಯ ಸಿನೆಮಾ ನೀಡಿದ್ದಾರೆ.
 
ಇಂತಹ ಯಾವುದೇ ನಿರೀಕ್ಷೆಗಳಿಲ್ಲದೆ ಈ ಸಿನೆಮಾ ನೋಡಿದರೆ ಸಿನೆಮಾ ರುಚಿಸುತ್ತದೆ. ಮನರಂಜನೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾಡಿರುವ ಸಿನೆಮಾ ರಂಜನೆಯ ದೃಷ್ಟಿಯಿಂದ ಪ್ರೇಕ್ಷಕನ್ನು ಆಸನಕ್ಕೆ ಹಿಡಿದು ಕೂತಿರುವಂತೆ ಮಾಡುತ್ತದೆ. 

ವೆಬ್ದುನಿಯಾವನ್ನು ಓದಿ