ನಮ್ಮೂರ ರಸಿಕರ ಕತೆ ವೆಬ್ ಸರಣಿಯಾಗಿದ್ದು ಹೇಗೆ?

ಕೃಷ್ಣವೇಣಿ ಕೆ.

ಬುಧವಾರ, 2 ಜೂನ್ 2021 (09:50 IST)
ಬೆಂಗಳೂರು: ಗೊರೂರರ ಸುಪ್ರಸಿದ್ಧ ಕೃತಿ ‘ನಮ್ಮೂರ ರಸಿಕರು’ ವೆಬ್ ಸರಣಿ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ. ಕಟ್ಟೆ ಆಪ್ ಎಂಬ ಹೊಸದಾಗಿ ಲಾಂಚ್ ಆಗುತ್ತಿರುವ ಆಪ್ ನಲ್ಲಿ ನಮ್ಮೂರ ರಸಿಕರು ವೆಬ್ ಸರಣಿ ರೂಪದಲ್ಲಿ ಬಿಡುಗಡೆಯಾಗುತ್ತಿದೆ.

 

‘ನಮ್ಮೂರ ರಸಿಕರು’ ನಾಟಕ, ಪುಸ್ತಕ ರೂಪದಲ್ಲಿ ಓದಿರುತ್ತೀರಿ. ಆದರೆ ವೆಬ್ ಸರಣಿ ರೂಪದಲ್ಲಿ ತೆರೆಗೆ ಬರುತ್ತಿರುವುದು ಇದೇ ಮೊದಲು. ಈ ವೆಬ್ ಸರಣಿಯನ್ನು ನಿರ್ದೇಶಿಸಿರುವುದು ನಂದಿತಾ ಯಾದವ್ ಎಂಬ ಪ್ರತಿಭಾವಂತ ನಿರ್ದೇಶಕಿ. ಅಶೋಕ್ ಕಶ್ಯಪ್ ಛಾಯಾಗ್ರಹಣ, ಪ್ರಕಾಶ‍್ ಸೊಂಟಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಬಿ. ಸುರೇಶ, ಮಂಡ್ಯ ರಮೇಶ್, ರಮೇಶ್ ಪಂಡಿತ್-ಸುನೇತ್ರ ಪಂಡಿತ್, ಲಕ್ಷ್ಮೀ ಗೋಪಾಲಸ್ವಾಮಿ, ಸುಂದರ್, ರವಿಕುಮಾರ್ ಸೇರಿದಂತೆ ಘಟಾನುಘಟಿ ಕಲಾವಿದರು ಇದರಲ್ಲಿ ಪಾತ್ರ ಮಾಡಿದ್ದಾರೆ.


ಇದನ್ನು ವೆಬ್ ಸರಣಿ ರೂಪಕ್ಕೆ ತಂದಿರುವುದು ನಿರ್ದೇಶಕಿ ನಂದಿತಾ ಯಾದವ್. ಅವರ ಮಗನಿಗೆ ಗೊರೂರರ ಕೃತಿ ಓದುವಾಗ ಇದನ್ನು ಯಾಕೆ ತೆರೆಯ ಮೇಲೆ ತರಬಾರದು ಎಂಬ ಯೋಚನೆ ಬಂದಿತ್ತಂತೆ. ಅದನ್ನು ನಂದಿತಾ ಯಾದವ್ ಕಾರ್ಯರೂಪಕ್ಕೆ ತಂದಿದ್ದಾರೆ.

ಈ ವೆಬ್ ಸರಣಿಗೆ ಸಂಭಾಷಣೆ ಬರೆದಿರುವುದು ಗಟ್ಟಿಮೇಳ ಧಾರವಾಹಿ ಖ್ಯಾತಿಯ ಕಿರುತೆರೆ ನಟ ರವಿಕುಮಾರ್. ‘ಘಟಾನುಘಟಿ ಕಲಾವಿದರಿಗೆ ಸಂಭಾಷಣೆ ಬರೆಯುವುದು ದೊಡ್ಡ ಸವಾಲಾಗಿತ್ತು. ಆದರೆ ನಂದಿತಾ ಯಾದವ್ ಅವರ ಜೊತೆ ಈ ಹಿಂದೆ ಕೆಲಸ ಮಾಡಿದ್ದೆ. ಹೀಗಾಗಿ ಅದೇ ವಿಶ್ವಾಸದಲ್ಲಿ ನನಗೆ ಈ ವೆಬ್ ಸರಣಿಗೆ ಸಂಭಾಷಣೆ ಬರೆಯಲು ಹೇಳಿದರು. ಮೂಲತಃ ನಾನು ಕತೆಗಾರನಾಗಿದ್ದರಿಂದ ಸಂಭಾಷಣೆ ಬರೆಯಲು ಕಷ್ಟವಾಗಲಿಲ್ಲ. ಒಟ್ಟು ಎಂಟು ಭಾಗಗಳಲ್ಲಿ ಈ ವೆಬ್ ಸರಣಿ ಮೂಡಿಬರಲಿದೆ. ಈ ಎಂಟೂ ಭಾಗಗಳಿಗೂ ನಾನೇ ಸಂಭಾಷಣೆ ಬರೆದಿದ್ದೇನೆ. ಎರಡು ವರ್ಷಗಳ ಶ್ರಮದ ಫಲವಿದು. ಸಾಗರ, ಶಿವಮೊಗ್ಗ ಸೇರಿದಂತೆ ಮಲೆನಾಡಿನ ಸುಂದರ ವಾತಾವರಣದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಜನರಿಗೆ ಇದು ಇಷ್ಟವಾದರೆ ನಮ್ಮೂರ ರಸಿಕರ ಮುಂದಿನ ಭಾಗಗಳು ವೆಬ್ ಸರಣಿ ರೂಪದಲ್ಲಿ ನಿಮ್ಮ ಮುಂದೆ ಬರಬಹುದು’ ಎಂದು ರವಿಕುಮಾರ್ ಹೇಳುತ್ತಾರೆ.

ಕಟ್ಟೆ ಆಪ್ ಈ ತಿಂಗಳು ಲಾಂಚ್ ಆಗುವ ಸಾಧ್ಯತೆಯಿದ್ದು, ಈ ಆಪ್ ಮೂಲಕ ನಮ್ಮೂರ ರಸಿಕರ ವೆಬ್ ಸರಣಿ ಜನರನ್ನು ತಲುಪುವ ನಿರೀಕ್ಷೆ ತಂಡಕ್ಕಿದೆ. ಇಂತಹ ಅಪರೂಪದ ಕೃತಿಗಳನ್ನು ಪ್ರೋತ್ಸಾಹಿಸುವುದು ವೀಕ್ಷಕರ ಕೈಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ