ಮಗಳ ಸಿನಿಮಾದಿಂದ ರಜನಿಕಾಂತ್ ಗೆ ಭಾರೀ ಮುಖಭಂಗ

Krishnaveni K

ಶನಿವಾರ, 10 ಫೆಬ್ರವರಿ 2024 (09:22 IST)
ಬೆಂಗಳೂರು: ಮಗಳು ಐಶ್ವರ್ಯಾ ರಜನೀಕಾಂತ್ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸಲು ಹೋಗಿ ಸೂಪರ್ ಸ್ಟಾರ್ ರಜನೀಕಾಂತ್ ಭಾರೀ ಮುಖಭಂಗ ಅನುಭವಿಸಿದ್ದಾರೆ.

ಐಶ್ವರ್ಯಾ ನಿರ್ದೇಶನದ ಲಾಲ್ ಸಲಾಂ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ರಜನಿ ಮೊಯಿದ್ದೀನ್ ಬಾಬ ಎನ್ನುವ ಮುಸ್ಲಿಂ ವ್ಯಕ್ತಿಯ ಪಾತ್ರ ಮಾಡಿದ್ದರು. ಇದರಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಕತೆಯಿದೆ. ರಜನಿ ಪಾತ್ರ ಸುಮಾರು 40 ನಿಮಿಷ ಬಂದು ಹೋಗುತ್ತದೆ. ಆದರೆ ರಜನಿ ಚಿತ್ರದಲ್ಲಿ ಒಮ್ಮೆ ಬಂದರೂ ಸಾಕು ಜನ ಥಿಯೇಟರ್ ಗೆ ನುಗ್ಗುವಂತಹ ಅಭಿಮಾನಿಗಳಿರುವಾಗ ಲಾಲ್ ಸಲಾಂ ಮಾತ್ರ ಮೊದಲ ದಿನವೇ ಮುಗ್ಗರಿಸಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಮೊದಲ ದಿನವೇ ಥಿಯೇಟರ್ ಖಾಲಿ ಖಾಲಿ
ರಜನಿ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡಲು ಜನ ಥಿಯೇಟರ್ ಮುಂದೆ ಕ್ಯೂ ನಿಲ್ಲುತ್ತಾರೆ. ಆದರೆ ಲಾಲ್ ಸಲಾಂ ಸಿನಿಮಾದ ಮೊದಲ ದಿನದ ಶೋವನ್ನೇ ಜನರಿಲ್ಲದೇ ರದ್ದು ಮಾಡಲಾಗಿದೆ. ಥಿಯೇಟರ್ ಗಳು ಖಾಲಿ ಹೊಡೆದಿವೆ. ಮಗಳ ಸಿನಿಮಾ ಎಂಬ ಮಮಕಾರದಲ್ಲಿ ಅಭಿನಯಿಸಿದ್ದ ರಜನಿಗೆ ಮುಖಭಂಗವಾದಂತಾಗಿದೆ.

ರಜನಿ ಸಿನಿಮಾವೆಂದರೆ ಹೈಪ್, ಅಬ್ಬರದ ಪ್ರಚಾರವಿರುತ್ತದೆ. ಆದರೆ ಈ ಸಿನಿಮಾ ಪ್ರಚಾರದ ಕೊರತೆಯಿಂದಲೇ ಅರ್ಧ ಸೋತಿದೆ ಎನ್ನಲಾಗುತ್ತಿದೆ. ಲೈಕಾದಂತಹ ದೊಡ್ಡ ಪ್ರೊಡಕ್ಷನ್ ಸಂಸ್ಥೆ ಸಿನಿಮಾಗೆ ಬಂಡವಾಳ ಹೂಡಿತ್ತು. ಆದರೆ ಥಿಯೇಟರ್ ಗೆ ಜನ ಬಾರದೇ ಎಷ್ಟೋ ಕಡೆ ಶೋ ಕ್ಯಾನ್ಸಲ್ ಮಾಡಿ ಜನರಿಗೆ ಹಣ ರಿ ಫಂಡ್ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇದು ರಜನಿಗೆ ಇತ್ತೀಚೆಗಿನ ವರ್ಷಗಳಲ್ಲಿ ಸಿಕ್ಕ ಮೊದಲ ಸೋಲು ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ