ಬೆಂಗಳೂರು: ಕೊಲ್ಕತ್ತಾದಲ್ಲಿ ವೈದ್ಯೆಯ ಮೇಲೆ ನಡೆದ ಕೊಲೆ, ಅತ್ಯಾಚಾರ ಪ್ರಕರಣಕ್ಕೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಲೆಂದು ದೇಶದಾದ್ಯಂತ ಆಕ್ರೋಶ ಹೊರಹಾಕಿ, ಪ್ರತಿಭಟನೆ ನಡೆಸಲಾಗುತ್ತಿದೆ. ಅತ್ಯಾಚಾರ ಪ್ರಕರಣಗಳ ವಿರುದ್ಧ ಸೆಲೆಬ್ರಿಟಿಗಳು ತೀವ್ರ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ವೈದ್ಯೆಯ ಮೇಲಿನ ರೇಪ್ ಆಂಡ್ ಮರ್ಡರ್ ಬಗ್ಗೆ ನಟ ಧ್ರುವ ಸರ್ಜಾ ಅವರು ಆಕ್ರೋಶ ಹೊರಹಾಕಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿ ಇದ್ದೇನೆ ಎಂಬುದು ಹೌದು. ಮಾರ್ಟಿನ್ ಸಿನಿಮಾವನ್ನು ಒಂದು ನಿಮಿಷ ಪಕ್ಕಕ್ಕೆ ಇಟ್ಟು ಬಿಡೋಣ. ಇವತ್ತು ವಿಡಿಯೋ ಮಾಡುತ್ತಿರುವ ಉದ್ದೇಶ 2024ರ 14ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ 16 ನಿಮಿಷಕ್ಕೆ ಒಂದು ಹೆಣ್ಮಗು ಮೇಲೆ ಅತ್ಯಾಚಾರ ನಡೆಯುತ್ತಿದೆ. ಎಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ, ಗೌರವ ಇರುವುದಿಲ್ಲವೋ ಅಲ್ಲಿ ಭಗವಂತನೇ ಇರುವುದಿಲ್ಲ.
ನಮ್ಮದು ರಾಮಜನ್ಮ ಭೂಮಿ. ಕೆಲವು ಪಾಪಿಗಳು ಮಾಡುವ ಕೃತ್ಯದಿಂದ ನಮ್ಮ ಭಾರತಕ್ಕೆ ಕೆಟ್ಟ ಹೆಸರು. ಹೆಣ್ಮಕ್ಕಳು ಹೀಗಿರಿ, ಹಾಗೀರಿ, ಬಟ್ಟೆ ಸರಿಯಾಗಿ ಧರಿಸಿ ಎನ್ನುವ ಬದಲು ಒಬ್ಬ ಗಂಡು ಮಗುವಿಗೆ ಹೆಣ್ಮಕ್ಕಳನ್ನು ಹೇಗೆ ರಕ್ಷಿಸಬೇಕು, ಬೆಂಬಲಿಸಬೇಕೆಂದು ನಾವು ಮನೆಯಲ್ಲಿ ಹೇಳಿಕೊಡಬೇಕು.
ಇಂತ ರೇಪಿಸ್ಟ್‌ಗಳಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ಇಂಥವರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಜೀವಂತ ಸುಟ್ಟು ಹಾಕಿದರೂ ಸಮಾಧಾನ ಆಗಲ್ಲ. ಎಲ್ಲರೂ ಧ್ವನಿಯೆತ್ತ ಬೇಕಿದೆ. ಇದು ಭಾರತವನ್ನು ಬದಲಾಯಿಸುವ ಸಮಯ, ನಾವೆಲ್ಲರೂ ಒಂದಾಗಬೇಕು, ಜೈ ಆಂಜನೇಯ ಎಂದು ವಿಡಿಯೋ ಹಂಚಿಕೊಂಡಿದ್ದಾರೆ.