ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಜಗ್ಗೇಶ್ ಹೇಳಿದ್ದ ಮಾತುಗಳು ನಿಜವಾಗುತ್ತಿದೆ!
ಮಂಗಳವಾರ, 21 ಡಿಸೆಂಬರ್ 2021 (09:50 IST)
ಬೆಂಗಳೂರು: ಪ್ಯಾನ್ ಇಂಡಿಯಾ ಸಿನಿಮಾಗಳು ಮುಂದೊಮ್ಮೆ ನಮ್ಮ ಕನ್ನಡ ಚಿತ್ರರಂಗವನ್ನೇ ನುಂಗಿ ಹಾಕುತ್ತದೆ ಎಂದು ನವರಸನಾಯಕ ಜಗ್ಗೇಶ್ ಈ ಹಿಂದೊಮ್ಮೆ ಹೇಳಿಕೆ ನೀಡಿದ್ದರು. ಆಗ ಅವರ ಹೇಳಿಕೆ ಕೆಲವು ಸ್ಟಾರ್ ನಟರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಆದರೆ ಈಗ ಪುಷ್ಪ ಸಿನಿಮಾ ಸ್ಯಾಂಡಲ್ ವುಡ್ ಮೇಲೆ ಮಾಡುತ್ತಿರುವ ಹಾವಳಿ ನೋಡಿದರೆ ಅಂದು ಜಗ್ಗೇಶ್ ಹೇಳಿದ ಮಾತು ನಿಜವೆನಿಸುತ್ತದೆ. ತೆಲುಗು ಮೂಲದ ಪುಷ್ಪ ಸಿನಿಮಾ ಕರ್ನಾಟಕದಲ್ಲೂ ಬಿಡುಗಡೆಯಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಕನ್ನಡ ಅವತರಣಿಕೆಯೂ ಇದೆ.
ಆದರೆ ಕರ್ನಾಟಕದಲ್ಲಿ ಕನ್ನಡ ಅವತರಣಿಕೆಯ ಶೋ ಬೆರಳೆಣಿಕೆಯಷ್ಟು ಮಾತ್ರ ಬಿಡುಗಡೆಯಾಗಿದೆ. ತೆಲುಗು ಪಾರ್ಟ್ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ಸದ್ದಿಲ್ಲದೇ ಬೇರೆ ಭಾಷೆಯ ಚಿತ್ರಗಳು ಸ್ಯಾಂಡಲ್ ವುಡ್ ನ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ಹಿಂದೆ ಡಬ್ಬಿಂಗ್ ವಿರೋಧಿಸಿದ್ದ ಚಿತ್ರಮಂದಿ ಈಗ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಹೆಸರಿನಲ್ಲಿ ಪರಭಾಷೆ ಚಿತ್ರಗಳು ಕನ್ನಡದಲ್ಲಿ ದರ್ಬಾರ್ ನಡೆಸಲು ಮುಂದಾಗಿವೆ. ಈ ಬಗ್ಗೆ ಕೆಲವೇ ನಟರು ಮಾತ್ರ ಧ್ವನಿಯೆತ್ತುತ್ತಿದ್ದಾರೆ. ಮೊನ್ನೆಯಷ್ಟೇ ನಟಿ ಅದಿತಿ ಪ್ರಭುದೇವ ಕೂಡಾ ಇದು ನಮ್ಮ ಮನೆಯ ಅನ್ನ ತಿನ್ನಕ್ಕೆ ಪಕ್ಕದ ಮನೆಯವರ ಪರ್ಮಿಷನ್ ಕೇಳಿದಂತೆ ಎಂದಿದ್ದರು. ಪರಭಾಷೆ ಚಿತ್ರಗಳು ಇಲ್ಲಿ ಬಿಡುಗಡೆಯಾಗುವುದಿದ್ದರೆ ಕನ್ನಡ ಭಾಷೆಯಲ್ಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಬೇಕು. ನಮ್ಮ ಕನ್ನಡ ಸಿನಿಮಾಗಳನ್ನು ಬೆಳೆಸುವ ಬಗ್ಗೆ ಚಿತ್ರರಂಗ ಯೋಚಿಸಬೇಕು. ಇಲ್ಲದೇ ಹೋದರೆ ನಮ್ಮ ನೆಲದಲ್ಲಿ ನಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಪರಭಾಷೆಯವರ ಒಪ್ಪಿಗೆ ಪಡೆಯಬೇಕಾಗಿ ಬಂದೀತು.