ಬೆಂಗಳೂರು: ಅರಣ್ಯ ಇಲಾಖೆ ಕುರಿತಾದ ಸಭೆಗೆ ಇಂದು ಕರ್ನಾಟಕಕ್ಕೆ ಆಗಮಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ಈ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್ ಅವರ ಸಿನಿಮಾವನ್ನು ಸ್ಮರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಭೇಟಿ ನಂತರ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅಣ್ಣಾವ್ರ ಗಂಧದ ಗುಡಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ನಾನು ಈ ಸಿನಿಮಾವನ್ನು ನೋಡಿದ್ದೇನೆ. ನನಗೆ ಕನ್ನಡ ಭಾಷೆ ಮೇಲೆ ತುಂಬಾನೇ ಪ್ರೀತಿಯಿದೆ ಹಾಗೂ ಗೌರವಿಸುತ್ತೇನೆ ಎಂದರು.
ರಾಜ್‌ಕುಮಾರ್ ಅವರ 'ಗಂಧದ ಗುಡಿ' ಚಿತ್ರದಲ್ಲಿ ಅರಣ್ಯ ರಕ್ಷಣೆ ಮತ್ತು ಶ್ರೀಗಂಧ ಉಳಿಸುವ ಪ್ರಯತ್ನ ತೋರಿಸಿದ್ದರು. ಆದರೆ ಈಗ ಗಂಧ ಕಳ್ಳತನ ಇರುವ ಸಿನಿಮಾ ಮಾಡುವಂತಾಗಿದೆ. ಗಂಧದ ಗುಡಿ ಸಿನಿಮಾದಲ್ಲಿ ಅರಣ್ಯವನ್ನು ರಕ್ಷಿಸುವ ಬಗ್ಗೆ ಒಳ್ಳೆಯ ಸಂದೇಶವನ್ನು ಸಾರಿದ್ದಾರೆ. ಇದು ನಿಜ ಜೀವನದಲ್ಲೂ ಆಗಬೇಕಿದೆ.
ಆಂಧ್ರ ಹಾಗೂ ಕರ್ನಾಟಕದ ಜತೆ ಉತ್ತಮ ಸಂಬಂಧ ಇದ್ದು, ಇಂದಿನ ಸಭೆಯಲ್ಲಿ ಏಳು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅದರಲ್ಲಿ ರಕ್ತಚಂದನ ರಕ್ಷಣೆ, ಪುಂಡಾನೆ ಸೆರೆಹಿಡಿಯೋದು, ಅರಣ್ಯ ರಕ್ಷಣೆ ಸೇರಿದಂತೆ ಏಳು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಪವನ್ ಕಲ್ಯಾಣ್ ಅವರು ವಿವರಿಸಿದರು.