ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಆಂಡ್ ಗ್ಯಾಂಗ್ ಗೆ ನಾಳೆ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗುತ್ತಿದೆ. ಆದರೆ ಅವರಿಗೆ ನಾಳೆ ಜಾಮೀನು ಸಿಗದಂತೆ ಪೊಲೀಸರು ದೊಡ್ಡ ಪಟ್ಟಿಯನ್ನೇ ಮಾಡಿಕೊಂಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಸಾಕಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಈ ಮೂಲಕ ದರ್ಶನ್ ಆಂಡ್ ಗ್ಯಾಂಗ್ ಸುಲಭವಾಗಿ ಕೇಸ್ ನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇದರ ನಡುವೆ ಜಾಮೀನಿಗಾಗಿ ಆರೋಪಿಗಳು ಅರ್ಜಿ ಸಲ್ಲಿಸಬಹುದು. ಆದರೆ ನಾಳೆ ಅವರಿಗೆ ಜಾಮೀನು ಸಿಗುವುದು ಅನುಮಾನವಾಗಿದೆ. ಅದಕ್ಕೆ ಪೊಲೀಸರು ಮಾಡಿಕೊಂಡಿರುವ ಕಾರಣಗಳ ಪಟ್ಟಿಯೂ ಇದೆ.
ದರ್ಶನ್ ಆಂಡ್ ಗ್ಯಾಂಗ್ ಗೊತ್ತಿದ್ದೂ ಅಪರಾಧ ಮಾಡಿದ್ದಾರೆ. ಕೃತ್ಯದ ಬಳಿಕ ಉದ್ದೇಶಪೂರ್ವಕವಾಗಿ ಸಾಕ್ಷ್ಯ ನಾಶ ಮಾಡಿದ್ದಾರೆ. ಇದರ ಬಗ್ಗೆ ಎಫ್ಎಸ್ಎಲ್ ವರದಿಗಳು ಇನ್ನಷ್ಟೇ ಬರಬೇಕಿದೆ. ದರ್ಶನ್ ಆಂಡ ಗ್ಯಾಂಗ್ ಅರೆಸ್ಟ್ ಆಗದಂತೆ ಪ್ರಭಾವಿಗಳಿಂದ ಒತ್ತಡ ಹಾಕಿಸಿದ್ದರು. ಈ ಹಂತದಲ್ಲಿ ಅವರಿಗೆ ಜಾಮೀನು ಸಿಕ್ಕರೆ ಪ್ರಭಾವ ಬೀರಿ ಕೇಸ್ ಹಳ್ಳ ಹಿಡಿಸಬಹುದು. ಜೊತೆಗೆ ಸಾಕ್ಷ್ಯಗಳ ವಿರುದ್ಧ ಪ್ರಭಾವ ಬೀರಬಹುದು.
ದರ್ಶನ್ ಎ2 ಆರೋಪಿಯಾಗಿದ್ದು ಸೆಲೆಬ್ರಿಟಿಯಾಗಿದ್ದಾರೆ. ಅವರಿಗೆ ಸಾಕಷ್ಟು ಪ್ರಭಾವಿಗಳ ಪರಿಚಯವಿದೆ. ಹೀಗಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇರಲು ಬೇರೆ ಪ್ಲ್ಯಾನ್ ಮಾಡಬಹುದು. ಅಲ್ಲದೆ ಅವರಿಗೆ ಹಣ ಬಲ, ಜನ ಬಲವೂ ಇದ್ದು, ಕೇಸ್ ಬಿದ್ದು ಹೋಗುವಂತೆ ಮಾಡಬಹುದು. ಜಾಮೀನಿನ ಮೇಲೆ ಹೊರಗೆ ಬಂದು ವಿದೇಶದಲ್ಲಿ ತಲೆಮರೆಸಿಕೊಳ್ಳಬಹುದು. ಇದರಿಂದ ವಿಚಾರಣೆ ಕಷ್ಟವಾಗಲಿದೆ. ಹೀಗಾಗಿ ದರ್ಶನ್ ಆಂಡ್ ಗ್ಯಾಂಗ್ ಗೆ ಜಾಮೀನು ನೀಡಬಾರದು ಎಂದು ಪೊಲೀಸರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಿದ್ದಾರೆ.