ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿ ದರ್ಶನ್ ಮೊಬೈಲ್ ರಿಟ್ರೀವ್ ಗಾಗಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಈ ಪ್ರಕರಣದಲ್ಲಿ ಇಬ್ಬರ ಮೊಬೈಲ್ ನಲ್ಲಿರುವ ಮಾಹಿತಿ ಸಂಗ್ರಹಣೆ ಕೂಡಾ ಮಹತ್ವದ ಸಾಕ್ಷಿಯಾಗಲಿದೆ. ಅದರಲ್ಲೂ ದರ್ಶನ್ ಮತ್ತು ಪವಿತ್ರಾ ಮೊಬೈಲ್ ನಲ್ಲಿ ರೇಣುಕಾಸ್ವಾಮಿಗೆ ಸಂಬಂಧಿಸಿದ ಮಾಹಿತಿ, ಫೋಟೋಗಳು ಲಭ್ಯವಾಗುವ ಸಾಧ್ಯತೆಗಳಿವೆ. ಇದು ಪ್ರಕರಣಕ್ಕೆ ಮುಖ್ಯ ಸಾಕ್ಷಿಯಾಗಲಿವೆ.
ಆದರೆ ಇಬ್ಬರೂ ಐಫೋನ್ ಬಳಸುತ್ತಿದ್ದರು. ಇಬ್ಬರ ಫೋನ್ ರಿಟ್ರೀವ್ ಮಾಡುವುದು ಕಷ್ಟವಾಗುತ್ತಿದೆ. ಎಫ್ಎಸ್ಎಲ್ ವರದಿಗೆ ಕಳುಹಿಸಿ ಇಷ್ಟು ದಿನ ಕಳೆದಿದ್ದರೂ ಇನ್ನೂ ಪೊಲೀಸರು ಇಬ್ಬರ ಮೊಬೈಲ್ ಸೀಕ್ರೆಟ್ ಪಡೆಯಲು ಸಾಧ್ಯವಾಗಿಲ್ಲ. ಇನ್ನೊಂದು ವಾರದಲ್ಲಿ ಮೊಬೈಲ್ ರಿಟ್ರೀವ್ ಆಗಿ ವರದಿ ಬರುವ ಸಾಧ್ಯತೆಯಿದೆ.
ಮೊಬೈಲ್ ರಿಟ್ರೀವ್ ಆದ ಬಳಿಕ ಆ ಸಾಕ್ಷ್ಯಗಳನ್ನೂ ಕಲೆ ಹಾಕಿ ಪೊಲೀಸರು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಆಗ ಪ್ರಕರಣಕ್ಕೆ ಮತ್ತಷ್ಟು ಬಲ ಬರಲಿದೆ. ಈಗಾಗಲೇ ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು ಅಕ್ಟೋಬರ್ 8 ಕ್ಕೆ ತೀರ್ಪು ಬರುವ ಸಾಧ್ಯತೆಗಳಿವೆ.