ಡಬ್ಬಿಂಗ್ ವಿರೋಧಿಸಿ ಮೌನ ಪ್ರತಿಭಟನೆ

ಭಾನುವಾರ, 2 ಆಗಸ್ಟ್ 2015 (13:28 IST)
ಡಬ್ಬಿಂಗ್ ವಿರೋಧಿಸಿ ಕನ್ನಡ ಚಲನಚಿತ್ರ ನಿರ್ದೇಶಕರು ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಕುಮಾರ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಬಳಿಕ ಅದರ ಮುಂದೆ ಕುಳಿತು ಸುಮಾರು ಒಂದರಿಂದ ಒಂದುವರೆ ಗಂಟೆಗಳ ಕಾಲ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆಯನ್ನು ನಡೆಸಿದ್ದಾರೆ

 
ಕರ್ನಾಟಕ ಚಲನಚಿತ್ರ ನಿರ್ದೇಶಕ ಸಂಘದ ಅಧ್ಯಕ್ಷ ಎಂ.ಎಸ್ ರಮೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ನಿರ್ದೇಶಕ ಪಿ.ಶೇಷಾದ್ರಿ, ಯೋಗೇಶ್ ಹುಣಸೂರು, ರವಿ ಶ್ರೀವತ್ಸ, ಮಳವಳ್ಳಿ ಸಾಯಿಕೃಷ್ಣ ಡಾ. ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ ಗೋವಿಂದು, ನಟ ಶರಣ್, ಪಾಲ್ಗೊಂಡಿದ್ದಾರೆ.
 
ನಿರ್ದೇಶಕರ ಪ್ರತಿಭಟನೆಗೆ ಚಲನಚಿತ್ರ ಕಾರ್ಮಿಕ ಒಕ್ಕೂಟದ ಸದಸ್ಯರು, ಕಿರುತೆರೆ, ಹಿರಿತೆರೆ ಕಲಾವಿದರು, ಬೆಂಬಲ ನೀಡಿದ್ದು, ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.
 
ಪರ ಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡುವುದನ್ನು ನಿರ್ದೇಶಕರ ಸಂಘ ಹಾಗೂ ಚಲನಚಿತ್ರ  ಕಾರ್ಮಿಕರ ಒಕ್ಕೂಟ ನಿರಂತರವಾಗಿ ವಿರೋಧಿಸುತ್ತಿದೆ. ಡಬ್ಬಿಂಗ್ ಗೆ ಅವಕಾಶ ನೀಡಬಾರದು. ಕನ್ನಡ ಚಿತ್ರೋದ್ಯಮದಲ್ಲಿ ಡಬ್ಬಿಂಗ್ ಹಾವಳಿಯಿಂದ ನಿರುದ್ಯೋಗ ಹೆಚ್ಚಾಗಲಿದ್ದು, ಕನ್ನಡ ಚಿತ್ರೋದ್ಯಮ ನಷ್ಟಕ್ಕೆ ಗುರಿಯಾಗಲಿದೆ. ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕುವ ಉದ್ಯಮಿಗಳಿಗೆ, ಸಾವಿರಾರು ಕಲಾವಿದರಿಗೆ ಇದರಿಂದ ಅನ್ಯಾಯವಾಗಲಿದೆ. ಇದನ್ನು ಸಂಪೂರ್ಣ ಸ್ಥಗಿತಗೊಳಿಸಿ ಕನ್ನಡ ಚಿತ್ರೋದ್ಯಮ ಪ್ರೋತ್ಸಾಹಿಸುವ ಯೋಜನೆಗಳಿಗೆ ಆದ್ಯತೆ ನೀಡಬೇಕು. ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅವರ ಕಾಲದಲ್ಲಿ ಸಹ ಡಬ್ಬಿಂಗ್‌ಗೆ ಅವಕಾಶವಿರಲಿಲ್ಲ. ಈಗ ಸಹ ನಾವದಕ್ಕೆ ಅವಕಾಶ ನೀಡಲಾರೆವು. ಪ್ರಾಣ ಬೇಕಾದರೂ ಬಿಡುತ್ತೇವೆ. ಡಬ್ಬಿಂಗ್‌ ನಡೆಸಲು ಬಿಡುವುದಿಲ್ಲ  ಎಂದು ಪ್ರತಿಭಟನಾಕಾರರು ಗುಡುಗಿದ್ದಾರೆ. 
 
ಕನ್ನಡತನ, ಕನ್ನಡ ಚಿತ್ರರಂಗ ಉಳಿಯಬೇಕಾದರೆ ಡಬ್ಬಿಂಗ್‌ಗೆ ಅವಕಾಶ ನೀಡಬಾರದು, ಸಿಸಿಐ ತೀರ್ಪು ಅಂತಿಮವಲ್ಲ. ಇದನ್ನು ವಿರೋಧಿಸಿ ನಾವು ನ್ಯಾಯಾಂಗ ಹೋರಾಟ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. 
 
ರಾಜ್ ಸಮಾಧಿಯಿಂದ ವಿಷ್ಣುವರ್ಧನ್ ಸಮಾಧಿಗೆ ತೆರಳುತ್ತಿರುವ ಪ್ರತಿಭಟನಾಕಾರರು ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಅಲ್ಲಿ ಕೂಡ ಪ್ರತಿಭಟನೆ ನಡೆಸಲಿದ್ದಾರೆ. 
ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ವೆಬ್ದುನಿಯಾವನ್ನು ಓದಿ