ಬೆಂಗಳೂರು: ಪುನೀತ್ ರಾಜ್ ಕುಮಾರ್ ನಾಯಕರಾಗಿರುವ ಮೊದಲ ಸಿನಿಮಾ ಅಪ್ಪು ಇಂದು ಮತ್ತೆ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಸನ್ನಿವೇಶವೊಂದರಲ್ಲಿ ಅವರು ಡ್ಯೂಪ್ ಕೂಡಾ ಇಲ್ಲದೇ ಜಿಗಿದ ಸಂದರ್ಭವೊಂದನ್ನು ಹಿರಿಯ ನಟ ಶ್ರೀನಿವಾಸಮೂರ್ತಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು.
ಮಾರ್ಚ್ 17 ರಂದು ಪುನೀತ್ ಹುಟ್ಟುಹಬ್ಬದ ನಿಮಿತ್ತ ಅಪ್ಪು ಸಿನಿಮಾವನ್ನು ರಿ ರಿಲೀಸ್ ಮಾಡಲಾಗುತ್ತಿದೆ. ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಪುನೀತ್ ರಾಜ್ ಕುಮಾರ್ ಬಳಿಕ ಕೆಲವು ಸಮಯದಿಂದ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದರು. ಬಳಿಕ ಅವರು ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದು ಅಪ್ಪು ಸಿನಿಮಾ ಮೂಲಕ. ಈ ಸಿನಿಮಾದಲ್ಲಿ ಅವರಿಗೆ ಕ್ರೇಜಿ ಕ್ವೀನ್ ರಕ್ಷಿತಾ ನಾಯಕಿಯಾಗಿ ಅಭಿನಯಿಸಿದ್ದರು. ಅವರಿಗೂ ಇದು ಮೊದಲ ಸಿನಿಮಾ.
ಈ ಸಿನಿಮಾಗಾಗಿ ಪುನೀತ್ ಎಲ್ಲಾ ರೀತಿಯಿಂದ ತಯಾರಿ ಮಾಡಿಕೊಂಡೇ ಬಂದಿದ್ದರು. ನಾಯಕನಾಗಿ ಚಿತ್ರರಂಗಕ್ಕೆ ರಿ ಎಂಟ್ರಿ ಕೊಡುವ ಮೊದಲು ಡ್ಯಾನ್ಸ್, ಫೈಟ್ ಎಲ್ಲವನ್ನೂ ಕಲಿತು ಬಂದಿದ್ದರು. ಚಿಕ್ಕಂದಿನಿಂದಲೂ ಅವರಿಗೆ ಸಾಹಸ ಮಾಡುವುದೆಂದರೆ ತುಂಬಾ ಇಷ್ಟ. ಅವರಂತೆ ಸ್ಟಂಟ್ ಮಾಡೋರು ಯಾರೂ ಇಲ್ಲ ಎಂದು ಈಗಲೂ ಅನೇಕ ಸಾಹಸ ನಿರ್ದೇಶಕರು ಹೇಳುತ್ತಾರೆ.
ಇಂತಿಪ್ಪ ಪುನೀತ್ ತಮ್ಮ ಅಪ್ಪು ಸಿನಿಮಾದಲ್ಲಿ ನಾಯಕಿಗೆ ಪ್ರಪೋಸ್ ಮಾಡಿ ನಿನಗಾಗಿ ಇಲ್ಲಿಂದ ಹಾರಲೂ ರೆಡಿ ಎನ್ನುವ ಸನ್ನಿವೇಶವೊಂದಿದೆ. ಆ ದೃಶ್ಯದಲ್ಲಿ ಅವರು ಎತ್ತರದ ಕಟ್ಟಡದಿಂದ ಜಿಗಿಯಬೇಕು. ಸಾಮಾನ್ಯವಾಗಿ ಇಂತಹ ಸನ್ನಿವೇಶಕ್ಕೆ ಡ್ಯೂಪ್ ಬಳಸಲಾಗುತ್ತದೆ. ಆದರೆ ಅಪ್ಪು ಡ್ಯೂಪ್ ಬಳಸಲೂ ಒಪ್ಪಲಿಲ್ಲವಂತೆ. ಆ ಸನ್ನಿವೇಶದಲ್ಲಿ ಅಪ್ಪು ತಾವೇ ಜಂಪ್ ಮಾಡಿದರು. ನಮಗೆಲ್ಲಾ ಮೈ ಝುಂ ಎಂದಿತ್ತು. ಯಾವ ಡ್ಯೂಪ್ ಕೂಡಾ ಇಲ್ಲದೇ ತಾನೇ ಜಿಗಿದುಬಿಟ್ಟ ಎಂದು ಶ್ರೀನಿವಾಸಮೂರ್ತಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.